ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಪೈಕಿ ಬ್ಲೂ ಟಿಕ್ ಪಡೆಯಬಯಸುವವರಿಗೆ ಶುಲ್ಕ ವಿಧಿಸುವ ತೀರ್ಮಾನವೂ ಕೂಡ ಒಂದು. ಇದನ್ನು ಈಗ ಭಾರತದಲ್ಲೂ ಪರಿಚಯಿಸಲಾಗಿದ್ದು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಮಾಸಿಕ 900 ರೂಪಾಯಿ ನಿಗದಿಪಡಿಸಲಾಗಿದೆ.
ಇದೀಗ ಮೆಟಾ ಒಡೆತನದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಕೂಡಾ ಇದೇ ಹಾದಿಯನ್ನು ಅನುಸರಿಸಲು ಮುಂದಾಗಿದ್ದು, ವೆರಿಫೈಡ್ ಖಾತೆಗಳಿಗೆ ಇನ್ನು ಮುಂದೆ ಶುಲ್ಕ ವಿಧಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಇದನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಲ್ಲಿ ಪರಿಚಯಿಸಲಾಗುತ್ತದೆ.
ಮೂಲಗಳ ಪ್ರಕಾರ ವೆರಿಫೈಡ್ ಖಾತೆ ಹೊಂದಲು ಬಯಸುವವರು ವೆಬ್ ಬಳಕೆದಾರರಿಗೆ ಮಾಸಿಕ 991 ರೂಪಾಯಿಗಳಾಗಿದ್ದರೆ, ಐಒಎಸ್ ಬಳಕೆದಾರರಿಗೆ 1,239 ರೂಪಾಯಿ ಇರಲಿದೆ ಎಂದು ಹೇಳಲಾಗಿದೆ. ಇನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದರ ವಿವರ ಇನ್ನೂ ಬಹಿರಂಗವಾಗಿಲ್ಲ.