ಸಾಮಾಜಿಕ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಬರೋಬ್ಬರಿ 3.5 ಲಕ್ಷ ಕೋಟಿ ರೂಪಾಯಿಗಳಿಗೆ ಖರೀದಿಸಲು ಮುಂದಾಗಿದ್ದ ವಿಶ್ವದ ಅತಿ ಸಿರಿವಂತ ವ್ಯಕ್ತಿ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್, ಬಳಿಕ ಅದರಿಂದ ಹಿಂದೆ ಸರಿದಿದ್ದರು. ಹೀಗಾಗಿ ಅವರ ವಿರುದ್ಧ ಟ್ವಿಟ್ಟರ್ ಕಂಪನಿ ಕಾನೂನು ಸಮರಕ್ಕೆ ಮುಂದಾಗಿದೆ.
ಅಮೆರಿಕದ ಡೆಲೆವರ್ ನ್ಯಾಯಾಲಯದಲ್ಲಿ ಈ ಕುರಿತ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತಾವು ಟ್ವಿಟ್ಟರ್ ಖರೀದಿ ಒಪ್ಪಂದದಿಂದ ಹಿಂದೆ ಸರಿದಿದ್ದರ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ. ಭಾರತ ಸರ್ಕಾರದ ವಿರುದ್ಧ ಕರ್ನಾಟಕದ ನ್ಯಾಯಾಲಯದಲ್ಲಿ ಟ್ವಿಟ್ಟರ್ ಕಂಪನಿ ಕಾನೂನು ಸಮರ ನಡೆಸುತ್ತಿದ್ದು, ಖರೀದಿ ವೇಳೆ ಈ ವಿಷಯವನ್ನೇ ತಮಗೆ ತಿಳಿಸಿರಲಿಲ್ಲ ಎಂದು ಎಲಾನ್ ಮಸ್ಕ್ ಹೇಳಿದ್ದಾರೆನ್ನಲಾಗಿದೆ.
ಟ್ವಿಟ್ಟರ್ ಗೆ ಭಾರತ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಹೀಗಿದ್ದರೂ ಸಹ ಸರ್ಕಾರದ ಜೊತೆ ನಡೆಯುತ್ತಿದ್ದ ಅಪಾಯಕಾರಿ ದಾವೆಯ ಕುರಿತ ಮಾಹಿತಿಯನ್ನು ಮುಚ್ಚಿಟ್ಟು ಖರೀದಿ ಒಪ್ಪಂದಕ್ಕೆ ಸಹಿ ಹಾಕುವಂತೆ ಮೋಸ ಮಾಡಲು ಯತ್ನಿಸಲಾಯಿತು ಎಂದು ಗುರುತರ ಆರೋಪ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಯಾವುದೇ ಒಂದು ಸಂಸ್ಥೆ, ಅಲ್ಲಿನ ಸ್ಥಳೀಯ ಕಾನೂನುಗಳನ್ನು ಪಾಲನೆ ಮಾಡಬೇಕು ಎಂದು ಮಸ್ಕ್ ತಮ್ಮ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.