ಎಲೊನ್ ಮಸ್ಕ್ ಸಾರಥ್ಯದ ಟ್ವಿಟ್ಟರ್ ಭಾರತೀಯರ ಮೇಲೆ ಹಗೆ ಸಾಧಿಸ್ತಿದ್ಯಾ ಅನ್ನೋ ಅನುಮಾನ ದಟ್ಟವಾಗ್ತಾ ಇದೆ. ವಾರಾಂತ್ಯದಲ್ಲಿ ಭಾರತದಲ್ಲಿನ ಶೇ.90 ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಟ್ವಿಟ್ಟರ್ ವಜಾಗೊಳಿಸಿದೆ. ಎಂಜಿನಿಯರಿಂಗ್ ಮತ್ತು ಉತ್ಪನ್ನ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.
ಟ್ವಿಟ್ಟರ್ ಭಾರತದಲ್ಲಿ ಸರಿಸುಮಾರು 200 ಜನರನ್ನು ಮಾತ್ರ ಉದ್ಯೋಗಕ್ಕೆ ನೇಮಿಸಿಕೊಂಡಿತ್ತು. ಇದೀಗ ಶೇ.90ರಷ್ಟು ನೌಕರರನ್ನು ಕೆಲಸದಿಂದ್ಲೇ ಕಿತ್ತೊಗೆದಿದೆ. ಸದ್ಯ ಕೇವಲ ಡಜನ್‌ನಷ್ಟು ಸಿಬ್ಬಂದಿ ಮಾತ್ರ ಟ್ವಿಟ್ಟರ್ ಇಂಡಿಯಾದಲ್ಲಿ ಇದ್ದಾರೆ ಅಂತಾ ಹೇಳಲಾಗ್ತಿದೆ.
ಜಾಗತಿಕ ಇಂಟರ್ನೆಟ್ ಕಂಪನಿಗಳಾದ Twitter, Meta Platforms Inc. ಮತ್ತು Alphabet Inc.ನ Google ಗೆ ಭಾರತವು ಪ್ರಮುಖ ಬೆಳವಣಿಗೆಯ ಎಂಜಿನ್ ಇದ್ದಂತೆ. ಇದು ಹೊಸ ಆನ್‌ಲೈನ್ ಬಳಕೆದಾರರ ದೊಡ್ಡ ಜಾಲವನ್ನೇ ಹೊಂದಿದೆ. ಆದರೂ ಕಂಪನಿಗಳು ದೇಶದಲ್ಲಿನ ದೊಡ್ಡ ಟೆಕ್ ಸಂಸ್ಥೆಗಳಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ ಹೆಚ್ಚು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಎದುರಿಸುತ್ತಿವೆ.
ಭಾರತದಲ್ಲಿ ಕಿತ್ತೊಗೆಯಲಾದ ಶೇ.70ರಷ್ಟು ಉದ್ಯೋಗಗಳು ಜಾಗತಿಕ ಆದೇಶದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಕ್ಕೆ ಸೇರಿವೆ. ಮಾರ್ಕೆಟಿಂಗ್, ಸಾರ್ವಜನಿಕ ನೀತಿ ಮತ್ತು ಕಾರ್ಪೊರೇಟ್ ಸಂವಹನಗಳು ಸೇರಿದಂತೆ ಉಳಿದ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯರನ್ನೂ ಟ್ವಿಟ್ಟರ್ ವಜಾ ಮಾಡಿದೆ. ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ ಮೂಲದ ಟ್ವಿಟರ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3,700ಕ್ಕೆ ಇಳಿಸಿದೆ ಎನ್ನಲಾಗ್ತಾ ಇದೆ.
ಈ ಕುರಿತಂತೆ ಟ್ವಿಟ್ಟರ್ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ. ಭಾರತದಲ್ಲಿ ಟ್ವಿಟ್ಟರ್ ಬಹು ಜನಪ್ರಿಯವಾಗಿದೆ. ರಾಜಕೀಯ ಆಗುಹೋಗುಗಳು, ಚರ್ಚೆಗಳಿಗೂ ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ 84 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆದರೂ ಟ್ವಿಟ್ಟರ್ ಭಾರತೀಯರನ್ನೇ ವಜಾ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಮುಂಬೈ, ಬೆಂಗಳೂರು ಮತ್ತು ನವದೆಹಲಿಯಲ್ಲಿ ಟ್ವಿಟ್ಟರ್ ಕಚೇರಿಗಳಿವೆ.