ಬೆಂಗಳೂರು: ಮೋಜು-ಮಸ್ತಿಗೆಂದು ಬ್ರಿಗೇಡ್ ರೋಡ್ ಗೆ ಹೋಗಿದ್ದ ಟೆಕ್ಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಕಲ್ಯಾಣನಗರದ ಸಾಫ್ಟ್ ವೇರ್ ಇಂಜಿನಿಯರ್ ರಾಹುಲ್, ಇತ್ತೀಚೆಗೆ ಮೋಜು-ಮಸ್ತಿಗಾಗಿ ಆಟೋದಲ್ಲಿ ಬ್ರಿಗೇಡ್ ರೋಡ್ ಗೆ ತೆರಳಿದ್ದ. ಈ ವೇಳೆ ಮಧ್ಯರಾತ್ರಿ 3ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ರಾಹುಲ್ ಗೆ ಪರಿಚಯವಾಗಿದ್ದ. ಮೋಜು-ಮಸ್ತಿಗೆ ತನ್ನ ಬಳಿ ಯುವತಿಯರಿದ್ದಾರೆ ಎಂದು ಮೊಬೈಲ್ ನಲ್ಲಿದ್ದ ಯುವತಿಯರ ಫೋಟೋಗಳನ್ನು ತೋರಿಸಿದ್ದ. ಇದೆಲ್ಲ ತನಗೆ ಇಷ್ಟವಿಲ್ಲ ಎಂದು ರಾಹುಲ್ ತಕ್ಷಣ ಆಟೋ ಹತ್ತಿ ಸ್ಥಳದಿಂದ ತೆರಳಿದ್ದ.
ಆದರೆ ರಾಹುಲ್ ಆಟೋವನ್ನು ದುಷ್ಕರ್ಮಿಗಳ ಗುಂಪು ಫಾಲೋ ಮಾಡಿಕೊಂಡು ಬಂದಿತ್ತು. ಇದನ್ನು ಗಮನಿಸಿದ ರಾಹುಲ್, ಆಟೋ ಚಾಲಕನಿಗೆ ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದ್ದ. ಪೊಲೀಸ್ ಠಾಣೆಗೆ ಹೋಗುವ ಮಾರ್ಗದಲ್ಲಿಯೇ ಆಟೋ ಅಡ್ಡಗಟ್ಟಿದ ಕಾರಿನಲ್ಲಿದ್ದ ದುಷ್ಕರ್ಮಿಗಳು ರಾಹುಲ್ ಮೇಲೆ ಹಲ್ಲೆ ನಡೆಸಿ ಅಪಹರಿಸಿದ್ದರು.
ರಾತ್ರಿ ಪೂರ್ತಿ ಬೆಂಗಳೂರಿನ ಇಂದಿರಾನಗರ, ಕೆ.ಆರ್. ಪುರ, ಬೆಳ್ಳಂದೂರು, ಎಕೆಕ್ಟ್ರಾನಿಕ್ ಸಿಟಿ ಸುತ್ತಾಟ ನಡೆಸಿ ಬಳಿಕ ರಾಹುಲ್ ಕಾರಿನಲ್ಲಿಯೇ ಹಲ್ಲೆ ನಡೆಸಿ ಎಟಿಎಂ ಪಡೆದು ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ರಾಹುಲ್ ಮನೆಯವರಿಗೆ ಕರೆ ಮಾಡಿ 2 ಲಕ್ಷ ಹಣ ಹಾಕುವಂತೆ ಹೇಳಿ ಆ ಹಣವನ್ನೂ ಹಾಕಿಸಿಕೊಂಡು ರಾಹುಲ್ ನನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.
ರಾಹುಲ್ ನಿಂದ ಒಟ್ಟು 10 ಲಕ್ಷ ರೂಪಾಯಿ ಹಣ ದೋಚಿ ಗ್ಯಾಂಗ್ ಪರಾರಿಯಾಗಿತ್ತು. ಮರುದಿನ ರಾಹುಲ್ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ಸಂಬಂಧ ಇದೀಗ ನಾಲ್ವರು ದುಷ್ಕರ್ಮಿಗಳನ್ನು ಪೊಲಿಸರು ಬಂಧಿಸಿದ್ದಾರೆ.