ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕುರ್ಚಿ ಈಗ ಅಲುಗಾಡಲಾರಂಭಿಸಿದೆ. ಇದಕ್ಕೆ ಕಾರಣ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡ ಅನುಭವಿಸಿದ ಹೀನಾಯ ಸೋಲು. ಈ ಪರಾಭವದೊಂದಿಗೆ ತರಬೇತುದಾರ ದ್ರಾವಿಡ್ ಅವರ ರಿಪೋರ್ಟ್ ಕಾರ್ಡ್‌ನಲ್ಲಿ ಮತ್ತೊಂದು ಕೆಟ್ಟ ದಾಖಲೆ ಸೇರಿದಂತಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ರೋಹಿತ್ ಶರ್ಮಾರದ್ದು ಕೂಡ ಅದೇ ಸ್ಥಿತಿ. ತಂಡದ ಕೆಟ್ಟ ಪ್ರದರ್ಶನದಿಂದಾಗಿ ಕೋಚ್ ರಾಹುಲ್ ದ್ರಾವಿಡ್ ಅವರ ಕುರ್ಚಿಗೂ ಅಪಾಯವಿದೆ. ಆದರೆ ಬಿಸಿಸಿಐ ದಿಢೀರ್ ನಿರ್ಧಾರ ತೆಗೆದುಕೊಳ್ಳುವ ಬದಲು ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಹೀನಾಯ ಸೋಲಿನೊಂದಿಗೆ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಹಾಗಾಗಿ ರಾಹುಲ್ ದ್ರಾವಿಡ್ ಅವರ ತರಬೇತುದಾರ ಹುದ್ದೆ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ. ರವಿಶಾಸ್ತ್ರಿ ನಂತರ ದ್ರಾವಿಡ್ ಕೋಚ್ ಹುದ್ದೆ ಅಲಂಕರಿಸಿದ್ದರು. ದ್ರಾವಿಡ್ ತರಬೇತುದಾರರಾಗಿ ನೇಮಕಗೊಂಡು ವರ್ಷ ಕಳೆಯುವಷ್ಟರಲ್ಲೇ ಅವರ ಕುರ್ಚಿಗೇ ಕಂಟಕ ಎದುರಾಗಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳು ದ್ರಾವಿಡ್ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು. ಆದ್ರೀಗ ವಿಶ್ವಕಪ್ ಸೋಲಿನ ಬಳಿಕ ಅವರ ಕಾರ್ಯಕ್ಷಮತೆಯನ್ನು ಪರಾಮರ್ಶಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ.
ಆದರೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯವರೆಗೂ ಬಿಸಿಸಿಐ ಕಾಯಲಿದೆ. ಆ ಸರಣಿಯ ನಂತರ ದ್ರಾವಿಡ್ ಅವರ ಪ್ರದರ್ಶನವನ್ನು ಖಂಡಿತವಾಗಿ ಪರಿಗಣಿಸಲಾಗುವುದು. ಬಿಸಿಸಿಐ ಜತೆಗಿನ ರಾಹುಲ್ ದ್ರಾವಿಡ್ ಒಪ್ಪಂದ ಸದ್ಯಕ್ಕೆ ವಾರ್ಷಿಕ 10 ಕೋಟಿ ರೂಪಾಯಿ. ದ್ರಾವಿಡ್ ಇದಕ್ಕೂ ಮೊದಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಹುಲ್ ದ್ರಾವಿಡ್ ತರಬೇತುದಾರರಾಗಿ ನೇಮಕವಾದ ಬಳಿಕ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಆಸೀಸ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ದ್ರಾವಿಡ್ ಕೋಚ್ ಆಗಿ ಮುಂದುವರಿಯುವ ಸಾಧ್ಯತೆ ಇದೆ.