ಹೈದರಾಬಾದ್: ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಟಿ ಆರ್ ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ತೆಲಂಗಾಣದ ಮುನಗೋಡು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಸಂದರ್ಭವಾಗಿರುವುದರಿಂದ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಆಡಳಿತಾರೂಢ ಟಿ ಆರ್ ಎಸ್ ನ ನಾಲ್ವರು ಶಾಸಕರನ್ನು ಖರೀದಿಸಲು ಮುಂದಾದಾಗ ಪೊಲಿಸರು ನಡೆಸಿದ ದಾಳಿಯಲ್ಲಿ ಬರೋಬ್ಬರಿ 15 ಕೋಟಿ ಸಮೇತ ಮೂವರು ಸಿಕ್ಕಿಬಿದ್ದಿದ್ದಾರೆ.
ಹೈದರಾಬಾದ್ ನ ಹೊರವಲಯದ ಫಾರ್ಮ್ ಹೌಸ್ ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದ್ದ ವೇಳೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಹರಿಯಾಣದ ಫರಿದಾಬಾದ್ ನ ಅರ್ಚಕ ಸತೀಶ್ ಶರ್ಮಾ ಅಲಿಯಾಸ್ ರಾಮಚಂದ್ರ ಭಾರತಿ, ತಿರುಪತಿಯ ಧರ್ಮದರ್ಶಿ ಡಿ. ನರಸಿಂಹಯಾಜಿ ಹಾಗೂ ಉದ್ಯಮಿ ನಂದಕುಮಾರ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಇವರು ಟಿ ಆರ್ ಎಸ್ ಶಾಸಕರಾದ ಗುವ್ವಾಲ ಬಾಲರಾಜು, ಬೀರಂ ಹರ್ಷವರ್ಧನ್ ರೆಡ್ಡಿ, ಪಿಣಪಾಕ ಶಾಸಕ ರೇಗಾ ಕಾಂತರಾವ್ ಹಾಗೂ ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರನ್ನು ಖರೀದಿಸಲು ಯತ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯವಹಾರ ನಡೆದಾಗಲೇ ದಾಳಿ ನಡೆಸಲಾಗಿದೆ. ಟಿ ಆರ್ ಎಸ್ ಶಾಸಕ ಬಾಲ್ಕಾ ಸುಮನ್ ಅವರು ಇದು ಬಿಜೆಪಿ ಕೆಲಸವಾಗಿದ್ದು, ಆಪರೇಷನ್ ಕಮಲದ ಮೂಲಕ ನಮ್ಮ ಶಾಸಕರನ್ನು ಖರೀದಿಸಲು ಶಾಸಕರಿಗೆ 100 ಕೋಟಿ ಆಫರ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.