ಹೈದರಾಬಾದ್: ತೆಲಂಗಾಣದ ಟಿ ಆರ್ ಎಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಖರೀದಿಸಲು ಬಿಜೆಪಿ ಯತ್ನಿಸಿದೆ ಎಂಬ ಆರೋಪ ಕೇಳಿಬಂದಿರುವ ನಡುವೆಯೇ ಶಾಸಕರು ಹಾಗೂ ಸ್ವಾಮೀಜಿ ನಡುವಿನ ಸಂಭಾಷಣೆಯ ಆಡಿಯೋ ಬಹಿರಂಗವಾಗಿದ್ದು ಅದರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಪ್ರಸ್ತಾಪವಾಗಿರುವುದು ಇದೀಗ ಸಂಚಲನ ಮೂಡಿಸಿದೆ.
ಟಿ ಆರ್ ಎಸ್ ನ ನಾಲ್ವರು ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಹೈದರಾಬಾದ್ ಹೊರವಲಯದ ಫಾರ್ಮ್ ಹೌಸ್ ಒಂದರಲ್ಲಿ ವ್ಯವಹಾರ ನಡೆದಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 15 ಕೋಟಿ ಹಣದ ಸಮೇತ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.
ಆದರೆ ಬಿಜೆಪಿ, ಆಪರೇಷನ್ ಕಮಲ ಆರೋಪವನ್ನು ತಳ್ಳಿ ಹಾಕಿತ್ತು. ಇದೀಗ ಟಿ ಆರ್ ಎಸ್ ಶಾಸಕ ರೋಹಿತ್ ರೆಡ್ಡಿ ಹಾಗೂ ರಾಮಚಂದ್ರ ಭಾರತಿ ಸ್ವಾಮೀಜಿ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು ಅದರಲ್ಲಿ ಬಿ.ಎಲ್. ಸಂತೋಷ್ ಬಗ್ಗೆ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಸ್ವಾಮೀಜಿ, ಬಿ.ಎಲ್ ಸಂತೋಷ್ ಪರವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ನೀವು ಬಿಜೆಪಿಗೆ ಸೇರ್ಪಡೆಯಾಗಿ ನಮ್ಮ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ನೇರವಾಗಿ ಆಮಿಷವೊಡ್ದಿದ್ದಾರೆ. ನಾನು ಹೈದರಾಬಾದ್ ಗೆ ಬರುತ್ತಿದ್ದೇನೆ. ಗ್ರಹಣದ ನಂತರ ಭೇಟಿಯಾಗೋಣ. ಇನ್ನೂ ಇಬ್ಬರು ಶಾಸಕರು ಬಿಜೆಪಿ ಸೇರಲಿದ್ದಾರೆ. ಇಡಿ, ಸಿಬಿಐ ದಾಳಿ ಆಗದಂತೆ ಸಂತೋಷ್ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಶಾಸಕರು ಹಾಗೂ ಸ್ವಾಮೀಜಿ ನಡುವಿನ ಈ ಆಡಿಯೋ ಇದೀಗ ರಾಷ್ಟ್ರ ರಾಜಕಾರಣದಲ್ಲೇ ಸಂಚಲನ ಮೂಡಿಸಿದೆ.