ಹಾವೇರಿ; ಪಕ್ಷ ಬಿಟ್ಟು ಬಂದವರಿಗೆ ರಾಜಮರ್ಯಾದೆ ಕೊಟ್ಟರು. ಆದ್ರೆ ನಮ್ಮನ್ನು ಉಪವಾಸದಿಂದ ಕೆಡವಿದರು. ಹಂತ ಹಂತವಾಗಿ ಚುಚ್ಚಿ ಅಪಮಾನ ಮಾಡಿದರು ಎಂದು ಎಂಎಲ್ ಸಿ ಆರ್.ಶಂಕರ್ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಅಪಪ್ರಚಾರ ಮಾಡಿದರು. ಹಂತ ಹಂತವಾಗಿ ಚುಚ್ಚಿ ನನ್ನನ್ನು ಮಾನಸಿಕವಾಗಿ ಕೊಲೆ ಮಾಡಿದ್ದಾರೆ. ಬಿಜೆಪಿಗೆ ಅಗತ್ಯವಿದ್ದ ಸಂದರ್ಭದಲ್ಲಿ ನಾನು ಬೆಂಬಲ ನೀಡಿದ್ದೆ. ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ನನ್ನ ಮನೆಗೆ ಬಂದು ಬೆಂಬಲ ಕೋರಿದ್ದರು. ಅದಾದ ನಂತರ ಅವರು ಪ್ರತಿ ದಿನ ನನ್ನ ನೋಯಿಸಿದ್ದಾರೆ. ಸಚಿವ ಸಂಪುಟದಲ್ಲಿ 6 ಖಾಲಿ ಸ್ಥಾನ ಇದ್ದರೂ ನನ್ನ ಪರಿಗಣಿಸಿಲ್ಲ ಎಂದು ದೂರಿದ್ದಾರೆ.
ಕೆಂಪೇಗೌಡರು ಕೆರೆ ಕಟ್ಟಿಸಿ ಸೊಸೆ ಬಲಿ ಕೊಟ್ಟಂತೆ ನನ್ನನ್ನು ಬಲಿ ಕೊಟ್ರು. ಇದರಲ್ಲಿ ಸ್ಥಳೀಯ ಶಾಸಕ ಸೇರಿ ರಾಜಕೀಯ ವಿರೋಧಿಗಳ ಪಿತೂರಿ ಇದೆ. ರಾಜಕೀಯವಾಗಿ ನನ್ನ ಮುಗಿಸಲು ನೋಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ದೊರೆಯದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಇನ್ನು ಐಟಿ ದಾಳಿ ವೇಳೆ ಸಿಕ್ಕ ವಸ್ತುಗಳ ವಿಚಾರವಾಗಿ ಅವರುಗಳನ್ನು ಚಾರಿಟೇಬಲ್ ಟ್ರಸ್ಟ್ ಒಂದರ ಅಡಿಯಲ್ಲಿ ಜನರಿಗೆ ವಿತರಿಸಲು ತಂದಿದ್ದಾಗಿ ತಿಳಿಸಿದ್ದಾರೆ. ಹಾವೇರಿಗೆ ಬಂದ ಬಳಿಕ ನಾನು ದಾನ ಧರ್ಮಗಳನ್ನು ಮಾಡುತ್ತಿದ್ದೇನೆ. ನನ್ನ ಆಸ್ತಿ ಮಾರಿ ಸಮಾಜ ಸೇವೆ ಮಡುತ್ತಿದ್ದೇನೆ. ಶಾಲೆ ಕಟ್ಟಿಸಬೇಕು ಎಂದು ನಿರ್ಧರಿಸಿದ್ದೆ. ಆದರೆ ಕರಣಾಂತರಗಳಿಂದ ಸಾಧ್ಯವಾಗಿಲ್ಲ. ಹಾಗಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಎಂದು ಬ್ಯಾಗ್ ವಿತರಣೆಗೆಂದು ತಂದಿದ್ದೆ ಎಂದು ಹೇಳಿದ್ದಾರೆ.