NEET ಪಿಜಿ ಕೌನ್ಸೆಲಿಂಗ್ ಪ್ರಕ್ರಿಯೆಯು ಜನವರಿ 12 ರಂದು ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಘೋಷಿಸಿದ ಹೊಸ OBC ಮತ್ತು EWS ಮೀಸಲಾತಿ ನೀತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕಾರಣ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಎರೆಡೆರಡು ಬಾರಿ ಮುಂದೂಡಲಾಗಿತ್ತು.
ಆದರೆ ಈ ಪ್ರಕ್ರಿಯೆಯಲ್ಲಿನ ವಿಳಂಬವನ್ನು ವಿರೋಧಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆಗೆ ಇಳಿದಿದ್ದರು. ಇವರ ಪ್ರತಿಭಟನೆ ನ್ಯಾಯಾಲಯದ ಗಮನ ಸೆಳೆಯಿತು. ಡಿಸೆಂಬರ್ 7 ರಂದು, ಅಖಿಲ ಭಾರತ ಕೋಟಾದ ಸ್ಥಾನಗಳಲ್ಲಿ ಅಸ್ತಿತ್ವದಲ್ಲಿರುವ 27 ಶೇಕಡಾ OBC (ಇತರ ಹಿಂದುಳಿದ ವರ್ಗ) ಮತ್ತು 10 ಶೇಕಡಾ EWS (ಆರ್ಥಿಕವಾಗಿ ದುರ್ಬಲ ವಿಭಾಗ) ಮೀಸಲಾತಿಗಳನ್ನು ಆಧರಿಸಿ ಮುಂದುವರಿಯಬೇಕು. ಪ್ರವೇಶ ಪ್ರಕ್ರಿಯೆಯನ್ನು ತುರ್ತಾಗಿ ಪ್ರಾರಂಭಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ನ್ಯಾಯಾಲಯದ ಆದೇಶದ ನಂತರ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ.
ಆರೋಗ್ಯ ಸಚಿವಾಲಯವು ನಿವಾಸಿ ವೈದ್ಯರಿಗೆ ಭರವಸೆ ನೀಡಿದಂತೆ, ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಜನವರಿ 12, 2022 ರಿಂದ ಎಂಸಿಸಿ, NEET-PG ಕೌನ್ಸೆಲಿಂಗ್ ಅನ್ನು ಪ್ರಾರಂಭಿಸುತ್ತಿದೆ ಎಂದು ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಇದರಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು, ಎಂದು ಹೇಳಿದ್ದಾರೆ