ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ಐವರು ಮಹಿಳಾ ಅರ್ಜಿದಾರರಲ್ಲಿ ಒಬ್ಬರು, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿರುವ ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ ಅನ್ನು ವಿರೋಧಿಸಿದ್ದಾರೆ.
ಅರ್ಜಿದಾರರಾದ ರಾಖಿ ಸಿಂಗ್, ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಆದಿ ವಿಶ್ವೇಶ್ವರನ ಶಿವಲಿಂಗದ ಅಸ್ತಿತ್ವದ ಮೇಲೆ ಪ್ರಶ್ನೆಗಳನ್ನು ಎತ್ತುವಂತಿದೆ ಎಂದು ಹೇಳಿದ್ದಾರೆ.
ಇತರ ನಾಲ್ಕು ಮಹಿಳಾ ಅರ್ಜಿದಾರರು, ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ ಅನ್ನು ಬೆಂಬಲಿಸಿದ್ದಾರೆ. ಈ ಸಂಬಂಧ ಅವರು ವಾರಣಾಸಿ ಜಿಲ್ಲಾ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದು, ಅರ್ಜಿ ಸಹ ಸ್ವೀಕಾರವಾಗಿದೆ. ಪ್ರಕರಣದ ವಿಚಾರಣೆ ಸೆಪ್ಟೆಂಬರ್ 29 ರಂದು ನಡೆಯಲಿದೆ.
ಮಸೀದಿ ಆವರಣದಲ್ಲಿ ಮುಸ್ಲಿಮರು ನಮಾಜ್ ಮಾಡುವ ಮೊದಲು ಧಾರ್ಮಿಕ ವಿಧಿವಿಧಾನಗಳನ್ನು ಮಾಡಲು ಬಳಸುವ ಸಣ್ಣ ಜಲಾಶಯವಾದ ‘ವಝುಖಾನಾ’ದ ಸಮೀಪದಲ್ಲಿ ‘ಶಿವಲಿಂಗ’ ಕಂಡುಬಂದಿದೆ ಎಂದು ಹೇಳಲಾಗಿತ್ತು. ಆದ್ರೆ ಮುಸ್ಲಿಂ ಅರ್ಜಿದಾರರು ಈ ಹಕ್ಕನ್ನು ನಿರಾಕರಿಸಿದ್ದಾರೆ, ಅದು ಶಿವಲಿಂಗವಲ್ಲ, ಆ ರಚನೆ ‘ವಝುಖಾನಾ’ದ ಕಾರಂಜಿ ವ್ಯವಸ್ಥೆಯ ಭಾಗವೆಂದು ಹೇಳಿಕೊಂಡಿದ್ದಾರೆ. ಮಸೀದಿಯ ಹೊರ ಗೋಡೆಯ ಮೇಲಿರುವ ‘ಹಿಂದೂ ದೇವತೆಗಳ’ ವಿಗ್ರಹಗಳನ್ನು ಪೂಜಿಸಲು ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ವಕೀಲರ ನಡುವೆ ಜಟಾಪಟಿ ?
ಮೂಲಗಳ ಪ್ರಕಾರ, ಕಾರ್ಬನ್ ಡೇಟಿಂಗ್‌ಗೆ ವಿರೋಧವು ವಾಸ್ತವವಾಗಿ ಅರ್ಜಿದಾರರ ವಕೀಲರ ನಡುವಿನ ಜಗಳದ ಪರಿಣಾಮವಾಗಿದೆ. ವರದಿಯ ಪ್ರಕಾರ, ಅರ್ಜಿದಾರರಾದ ರಾಖಿ ಸಿಂಗ್ ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಜಿತೇಂದ್ರ ಸಿಂಗ್ ವಿಷನ್ ಈ ಹೋರಾಟವನ್ನು ಪ್ರಾರಂಭಿಸಿದರು ಎನ್ನಲಾಗ್ತಿದೆ. ಆದರೆ ಇತರ ನಾಲ್ವರು ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ಎಲ್ಲಾ ಕ್ರೆಡಿಟ್ ತಮ್ಮದಾಗಿಸಿಕೊಳ್ತಿದ್ದಾರೆ ಅನ್ನೋ ಆರೋಪವಿದೆ. ಜ್ಞಾನವಾಪಿ ಕ್ಯಾಂಪಸ್‌ನ ಸಮೀಕ್ಷೆಯ ವೀಡಿಯೋ ಸೋರಿಕೆಯಾಗುವ ಮುನ್ನವೇ ಎರಡೂ ಬಣಗಳ ಮಧ್ಯೆ ವಾಗ್ವಾದ ನಡೆದಿತ್ತು.