ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗಿರೋದ್ರಿಂದ ಚೀನಾದ ಶಾಂಘೈನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಜನರಿಗೆ ಮನೆಯಿಂದ ಹೊರಬರಲು ಕೂಡ ಅವಕಾಶವಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿಯಿದ್ದರಷ್ಟೇ ಆಚೆ ಬರಬಹುದು. ಮನೆಯಲ್ಲಿ ಆಹಾರ ವಸ್ತುಗಳು ಖಾಲಿಯಾಗಿದ್ರೆ ಅದನ್ನು ಖರೀದಿ ಮಾಡಲು ಕೂಡ ಆಗದಂತಹ ಪರಿಸ್ಥಿತಿ.
ಶಾಂಘೈನಲ್ಲಿ ಜನರು ಅಕ್ಷರಶಃ ನರಕ ಯಾತನೆ ಅನುಭವಿಸ್ತಿದ್ದಾರೆ. ಶಾಂಘೈನಲ್ಲಿ 26 ಮಿಲಿಯನ್ ಜನಸಂಖ್ಯೆ ಇದೆ. ಚೀನಾದಲ್ಲಿ ಈ ನಗರವೇ ಕೊರೊನಾ ಸೋಂಕಿನ ಹಾಟ್ ಸ್ಪಾಟ್. ಹಾಗಾಗಿ ಜನರಿಗೆ ಮನೆಯಲ್ಲೇ ಇರುವಂತೆ ಕಟ್ಟಪ್ಪಣೆ ಮಾಡಲಾಗಿದೆ.
ಆಹಾರವೂ ಇಲ್ಲದೆ ತತ್ತರಿಸಿದ್ದ ಜನರು ಮನೆಯ ಬಾಲ್ಕನಿಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದಾರೆ. ಅದರ ಬೆನ್ನಲ್ಲೇ ಡ್ರೋನ್ ಗಳ ಮೂಲಕ ಸಾರ್ವಜನಿಕರಿಗೆ ಕೆಲವೊಂದು ಸೂಚನೆಗಳನ್ನು ಕೊಡಲಾಗ್ತಾ ಇದೆ. ಸ್ವಾತಂತ್ರ್ಯಕ್ಕಾಗಿ ನಿಮ್ಮ ಆಸೆಗಳನ್ನು ಕಂಟ್ರೋಲ್ ಮಾಡ್ಕೊಳ್ಳಿ ಅಂತಾ ಸರ್ಕಾರ ಘೋಷಣೆಗಳನ್ನು ಹೊರಡಿಸ್ತಾ ಇರೋದು ಬಹಿರಂಗವಾಗಿದೆ.
ಕಿಟಕಿ ತೆರೆಯೋದು, ಹಾಡು ಹೇಳೋದು ಇದ್ಯಾವುದನ್ನೂ ಜನರು ಮಾಡುವಂತಿಲ್ಲ. ಇನ್ನೂ ವಿಚಿತ್ರ ಅಂದ್ರೆ ದಂಪತಿಗಳು ಮತ್ತು ಜೊತೆಯಾಗಿ ವಾಸಿಸ್ತಾ ಇರೋ ಪ್ರೇಮಿಗಳು ದೂರ ದೂರವೇ ಇರಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಜೊತೆಯಲ್ಲಿ ಮಲಗಬೇಡಿ, ಪರಸ್ಪರ ತಬ್ಬಿಕೊಳ್ಳಬೇಡಿ, ಮುತ್ತಿಡಲು ಕೂಡ ಅವಕಾಶವಿಲ್ಲ. ಒಟ್ಟಿಗೆ ಊಟ ಮಾಡೋದು ಬೇಡ, ಪ್ರತ್ಯೇಕವಾಗಿಯೇ ಆಹಾರ ಸೇವಿಸಿ.
ಹೀಗೆ ಮಾಡುವುದರಿಂದ ಕೊರೊನಾ ಸೋಂಕು ತಡೆಯಬಹುದು ಅಂತಾ ಶಾಂಘೈನ ಆರೋಗ್ಯ ಕಾರ್ಯಕರ್ತರು ಘೋಷಣೆ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರೋಬೋಟ್ ಗಳು ಕೂಡ ಶಾಂಘೈ ನಗರದಲ್ಲಿ ಗಸ್ತು ತಿರುಗುತ್ತಿರುವ ವಿಡಿಯೋ ವೈರಲ್ ಆಗಿತ್ತು.