ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರು ಸಿಬಿಐ ತನಿಖೆಗೆ ಪ್ರಕರಣ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ, ಇದು ಸಾಮಾನ್ಯ ಕೊಲೆ ಎಂಬಂತೆ ಸರ್ಕಾರ ಭಾವಿಸಿದಂತಿದೆ. ಸ್ಥಳೀಯ ಪೊಲೀಸರು ಸಾಮಾನ್ಯ ಪ್ರಕರಣ ಎಂಬಂತೆ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಬಿಜೆಪಿ ಇತರ ಸದಸ್ಯರು ಧ್ವನಿಗೂಡಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಯಾವ ಷಡ್ಯಂತ್ರಕ್ಕೂ ಅವಕಾಶ ಕೊಡಲ್ಲ. ಯಾರ ಪ್ರಭಾವಕ್ಕೂ ಮಣಿಯಲ್ಲ. ಜೈನಮುನಿ ಹತ್ಯೆ ಕೇಸ್ ಸಿಬಿಐ ತನಿಖೆಗೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಸಿಎಂ ಹೇಳಿಕೆಗೆ ತೃಪ್ತರಾಗದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್ ಖಾದರ್ ಕಲಾಪವನ್ನು ಕೆಲ ಕಾಲ ಮುಂದೂಡಿದರು.