ಹಾಸನ: ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣದ ಪಕ್ಷವಾಗಿದ್ದು, ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾದ ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಬೇಲೂರಿನ ಇಬ್ಬೀಡು ಗ್ರಾಮದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜೆಡಿಎಸ್ ಪ್ರೈವೇಟ್ ಲಿಮಿಟೆಡ್ ಪಾರ್ಟಿ. ಕಾಂಗ್ರೆಸ್ ಪಕ್ಷವನ್ನು ದೆಹಲಿಯಲ್ಲಿರುವ ಒಂದು ಕುಟುಂಬ ನಿರ್ಣಯ ಮಾಡಿದರೆ ಜೆಡಿಎಸ್ ಕರ್ನಾಟಕದಲ್ಲಿರುವ ಒಂದು ಕುಟುಂಬ ರಾಜಕಾರಣದ ಪಕ್ಷ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಕುಟುಂಬ ಸೇವೆಯಲ್ಲಿ ತೊಡಗಿದ್ದಾರೆ. ಆದರೆ ಬಿಜೆಪಿ ಸಾಮಾನ್ಯ ವ್ಯಕ್ತಿಯನ್ನೂ ನನ್ನ ಕುಟುಂಬ ಎಂದು ಭಾವಿಸುತ್ತದೆ. ಕಾಂಗ್ರೆಸ್-ಜೆಡಿಎಸ್ ನವರು ತೋರ್ಪಡಿಕೆಗಾಗಿ ಜಗಳವಿದ್ದಂತೆ ನಾಟಕವಾಡುತ್ತಿದ್ದಾರೆ. ಜೆಡಿಎಸ್ ತೋರಿಕೆಗಾಗಿ ತಾನು ಕಾಂಗ್ರೆಸ್ ವಿರೋಧಿ ಎಂಬಂತೆ ನಾಟಕವಾಡುತ್ತಿದೆ. ಚುನಾವಣೆ ಮುಗಿಯುತ್ತಿದ್ದಂತೆ ಅವರು ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತಾರೆ. ಜೆಡಿಎಸ್ ಗೆ ನೀಡುವ ಮತ ಕಾಂಗ್ರೆಸ್ ಗೆ ಹೋಗುತ್ತದೆ. ಕಾಂಗ್ರೆಸ್ ಗೆ ಮತ ಹಾಕಿದರೆ ವಿಕಾಸಕ್ಕೆ, ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
ಸಾಮಾಜಿಕ ನ್ಯಾಯದ ಹೆಸರಲ್ಲಿ ಕಾಂಗ್ರೆಸ್ ದೇಶದ ಜನರಿಗೆ ಮೋಸ ಮಾಡಿದೆ. ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.