ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿ ಅತ್ಯುತ್ಸಾಹದಿಂದ ತಯಾರಿ ನಡೆಸಿದ್ದ ಜೆಡಿಎಸ್ ನಾಯಕರಿಗೆ ಹಾಸನ ಟಿಕೆಟ್ ಹಂಚಿಕೆ ವಿಚಾರ ತಲೆ ನೋವಾಗಿ ಪರಿಣಮಿಸಿದ್ದು, ಹೀಗಾಗಿ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ, ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಆಕಾಂಕ್ಷಿಗಳಾಗಿದ್ದು, ಸ್ವರೂಪ್ ಅವರಿಗೆ ಟಿಕೆಟ್ ನೀಡಲು ಹೆಚ್.ಡಿ. ಕುಮಾರಸ್ವಾಮಿ ಬಯಸಿದ್ದರಾದರೂ ರೇವಣ್ಣ ತಮ್ಮ ಪಟ್ಟು ಸಡಿಲಿಸುತ್ತಿಲ್ಲ.
ಹಾಸನದಲ್ಲಿ ಪತ್ನಿಗೆ ಟಿಕೆಟ್ ನೀಡದಿದ್ದರೆ ಹೊಳೆನರಸೀಪುರದಿಂದ ತಾವು ಕೂಡ ಸ್ಪರ್ಧಿಸುವುದಿಲ್ಲ ಎಂದು ರೇವಣ್ಣ ಹೇಳುತ್ತಿದ್ದು, ಟಿಕೆಟ್ ಹಂಚಿಕೆ ವಿಚಾರ ಪಕ್ಷದ ವರಿಷ್ಠ ದೇವೇಗೌಡರ ತನಕ ತಲುಪಿದ್ದರೂ ಬಗೆಹರಿಯುತ್ತಿಲ್ಲ. ಕುಮಾರಸ್ವಾಮಿ ಹಾಗೂ ರೇವಣ್ಣ ತಮ್ಮ ತಮ್ಮ ನಿಲುವುಗಳಿಗೆ ಅಂಟಿಕೊಂಡಿರುವ ಕಾರಣ ವಿಚಾರ ದಿನೇ ದಿನೇ ಕಗ್ಗಂಟಾಗುತ್ತಿದೆ.
ಹಾಸನ ಟಿಕೆಟ್ ನ್ನು ಸ್ವರೂಪ್ ಅವರಿಗೆ ನೀಡಿದರೆ ಕುಟುಂಬದಲ್ಲಿ ಒಡಕು ಮೂಡಲು ಕಾರಣವಾಗುತ್ತದಾ ಎಂಬ ಆತಂಕ ದೇವೇಗೌಡರನ್ನು ಕಾಡುತ್ತಿದೆ ಎನ್ನಲಾಗಿದ್ದು, ಇದು ಪಕ್ಷದ ಕಾರ್ಯಕರ್ತರಲ್ಲೂ ನಿರುತ್ಸಾಹ ಮೂಡಿಸಿದೆ. ಅಂತಿಮವಾಗಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಲಾಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.