ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿ ಲಾಕ್ ಡೌನ್ ಜೂನ್ 13ರವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಲು ಜೂನ್ 7ರ ಬಳಿಕ ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಉತ್ತಮ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ತಿಳಿಸಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇನ್ನೂ ಒಂದು ವಾರ ಕಾಲ ಲಾಕ್ ಡೌನ್ ವಿಸ್ತರಿಸಿ, ಬಳಿಕ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಬೇಕು ಎಂದು ಸಲಹೆ ನೀಡಿದೆ ಎನ್ನಲಾಗಿದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿ ಸಿದ್ಧವಿದೆ. ಅದನ್ನು ಇಂದು ಸಿಎಂ ಯಡಿಯೂರಪ್ಪನವರಿಗೆ ಸಲ್ಲಿಸಲಾಗುವುದು. ಕೋವಿಡ್ ಸಾಂಕ್ರಾಮಿಕ ರೋಗವಾಗಿರುವುದರಿಂದ ಬಹಳ ಜವಾಬ್ದಾರಿಯಿಂದ ಹೆಜ್ಜೆ ಇಡಬೇಕು. ನಾವು ಸುಲಭವಾಗಿ ಲಾಕ್ ಡೌನ್, ಅನ್ ಲಾಕ್ ಎಂದು ಹೇಳಬಹುದು. ಆದರೆ ಸಾಂಕ್ರಾಮಿಕ ರೋಗದ ಸಾಧಕ ಬಾಧಕದ ಬಗ್ಗೆ ತಜ್ಞರು ನೀಡುವ ಸಲಹೆ ಸೂಚನೆಗಳನ್ನು ಪರಿಶೀಲಿಸಿ ವೈಜ್ಞಾನಿಕವಾಗಿ ನಿರ್ಧರಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಲಾಕ್ ಡೌನ್ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.