ಕೊರೊನಾ ನಾಲ್ಕನೇ ಅಲೆಯ ಭೀತಿ ಹೆಚ್ಚಾಗಿರುವುದರಿಂದ ಭಾರತ ಸರ್ಕಾರ ಕೂಡ ಅಲರ್ಟ್ ಆಗಿದೆ. ಚೀನಾ, ದಕ್ಷಿಣ ಕೊರಿಯಾ ಮತ್ತು ಯುರೋಪ್ ನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಏರುತ್ತಲೇ ಇದೆ. ಕಳೆದ ಹಲವು ದಿನಗಳಿಂದ ಚೀನಾದಲ್ಲಿ ಕೋವಿಡ್ ಕೇಸ್ ಗಳು ವೇಗವಾಗಿ ಏರುತ್ತಲೇ ಇವೆ. ಕೊರೊನಾಸುರನಿಗೆ ಬ್ರೇಕ್ ಹಾಕಲು ಚೀನಾ ಸರ್ಕಾರ ಹಲವು ನಗರಗಳಲ್ಲಿ ಲಾಕ್ ಡೌನ್ ಹೇರಿದೆ. ದಕ್ಷಿಣ ಕೊರಿಯಾದಲ್ಲಂತೂ ಪ್ರತಿದಿನ ಕೊರೊನಾ ಕೇಸ್ ಗಳು 6 ಲಕ್ಷ ದಾಟುತ್ತಿವೆ.
ಹಾಗಾಗಿ ಕೊರೊನಾ ಎದುರಿಸಲು ಎಲ್ಲಾ ಇಲಾಖೆಗಳು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ತೀವ್ರಗೊಳಿಸಲಾಗಿದೆ. ಕೊರೊನಾದಿಂದ ಪಾರಾಗಲು ದೇಶದ ಎಲ್ಲಾ ನಾಗರಿಕರಿಗೂ ಬೂಸ್ಟರ್ ಡೋಸ್ ಕೊಡಲು ತಯಾರಿ ನಡೆದಿದೆ. ಈ ಬಗ್ಗೆ ಇನ್ನೂ ಅಧಿಕೃತ ನಿರ್ಧಾರವಾಗಿಲ್ಲ. ಆದ್ರೆ ಇದಕ್ಕಾಗಿ ಸರ್ಕಾರ ಈಗಾಗ್ಲೇ ಸಿದ್ಧತೆ ನಡೆಸುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಬೂಸ್ಟರ್ ಡೋಸ್ ಅನ್ನು ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆಯೇ ಅಥವಾ ಅದಕ್ಕೆ ಶುಲ್ಕ ವಿಧಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಬೂಸ್ಟರ್ ಡೋಸ್‌ಗಳನ್ನು ನೀಡಲಾಗುತ್ತಿದೆ. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸಹ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ. ದೇಶದಲ್ಲಿ ಓಮಿಕ್ರಾನ್ ಆರ್ಭಟ ಮುಗಿದ ನಂತರ ಅನೇಕ ರಾಜ್ಯಗಳಲ್ಲಿ ಶಾಲೆಗಳು ಆರಂಭವಾಗಿವೆ. ಹಾಗಾಗಿ ಮಕ್ಕಳಿಗೆ ಲಸಿಕೆ ನೀಡುವುದು ಅನಿವಾರ್ಯ.
ಓಮಿಕ್ರಾನ್ ನಂತರ ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗಿದ್ದು, ಕಳೆದ 24 ಗಂಟೆಗಳಲ್ಲಿ 1549 ಕೇಸ್ ಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 25 ಸಾವಿರದ ಸನಿಹದಲ್ಲಿದೆ. ಜೂನ್ 22ರೊಳಗೆ ಕೋವಿಡ್ ನಾಲ್ಕನೇ ಅಲೆ ಭಾರತಕ್ಕೆ ಬರಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿಂದೆ ಕೂಡ ಕೊರೊನಾಕ್ಕೆ ಸಂಬಂಧಪಟ್ಟಂತೆ ಐಐಟಿ ಕಾನ್ಪುರ ಹೇಳಿದ್ದ ಭವಿಷ್ಯ ಸರಿಯಾಗಿತ್ತು. ಮತ್ತೇನಾದ್ರೂ ಹಾಗೇ ಆದ್ರೆ ಮತ್ತೊಮ್ಮೆ ಆರೋಗ್ಯ ಕ್ಷೇತ್ರ ಹಾಗೂ ಆರ್ಥಿಕತೆಗೆ ಹೊಡೆತ ಬೀಳಬಹುದು.