ನೇರ ವೇತನ ಪಾವತಿ, ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹಿಸಿ ಜುಲೈ 1ರಿಂದ ರಾಜ್ಯದಾದ್ಯಂತ ಸ್ವಚ್ಛತೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ರಾಜ್ಯ ಪೌರಕಾರ್ಮಿಕರ ಮಹಾಸಂಘ ತೀರ್ಮಾನಿಸಿದೆ.
ಹುಬ್ಬಳ್ಳಿಯಲ್ಲಿ ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪೌರ ಕಾರ್ಮಿಕರ ಮಹಾ ಸಂಘದ ಅಧ್ಯಕ್ಷ ನಾರಾಯಣ ಈ ವಿಷಯ ತಿಳಿಸಿದ್ದು, ನೇರ ವೇತನ ಪಾವತಿ ಹಾಗೂ ಹೊರ ಗುತ್ತಿಗೆ ಪೌರಕಾರ್ಮಿಕರು ತಿಂಗಳಿಗೆ 14 ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದು, ಇತರೆ ಯಾವುದೇ ಸೌಲಭ್ಯ ಅವರಿಗೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನೌಕರರನ್ನು ಖಾಯಂಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತಾದರೂ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯದ ಕೆಲ ಅಧಿಕಾರಿಗಳ ಪಿತೂರಿಯಿಂದಾಗಿ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ 1 ರಿಂದ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಸ್ವಚ್ಛತೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಮಾಡಲಿದ್ದಾರೆ ಎಂದು ನಾರಾಯಣ ತಿಳಿಸಿದರು.