ಮೈಸೂರು: ಜೆ ಡಿ ಎಸ್ ತೊರೆದು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಉಲ್ಟಾ ಹೊಡೆದಿದ್ದು, ಜೆಡಿಎಸ್ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಹೆಚ್.ಡಿ.ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಜಿ.ಟಿ.ಡಿ, ಎಲ್ಲಾ ಪಕ್ಷದವರೂ ನನ್ನನ್ನು ಕರೆದಿದ್ದಾರೆ. ದಯವಿಟ್ಟು ಕ್ಷಮಿಸಿ ನಾನು ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂದಿದ್ದೇನೆ ಎಂದರು. ಕಾಂಗ್ರೆಸ್ ನಿಂದ ಸಿದ್ದರಾಮಯ್ಯನವರೂ ನನ್ನನ್ನು ಕರೆದಿದ್ದಾರೆ. ಬಿಜೆಪಿಯವರೂ ನನಗೆ ಬಂದು ಬಿಡಿ ಎಂದಿದ್ದಾರೆ. ಆದರೆ ನಾವು ಜೆಡಿಎಸ್ ಪಕ್ಷದಿಂದ ಬೆಳೆದಿದ್ದೇವೆ. ಜೆಡಿಎಸ್ ಕಟ್ಟುವುದೇ ನಮ್ಮ ಗುರಿ ಎಂದು ಹೇಳಿದರು.
ನಾನು ಮೂರು ವರ್ಷ ದೂರ ಇದ್ದಾಗಲೂ ದೇವೇಗೌಡರು ನನ್ನನ್ನು ತಪ್ಪಾಗಿ ಅರ್ಥೈಸಲಿಲ್ಲ. ಜಿಟಿಡಿ ನಮ್ಮ ಹೆಸರು ಉಳಿಸುತ್ತಾರೆ ಎಂದು ನಂಬಿದ್ದಾರೆ ಎಂದು ಕಣ್ಣೀರಾದ ಜಿ.ಟಿ.ದೇವೇಗೌಡ, ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿಗೊಳಿಸಿದ್ದು ದೇವೇಗೌಡರು. ರೈತರಿಗೋಸ್ಕರ ಜೆಡಿಎಸ್ ಪಕ್ಷ ಇದೆ. ದೇವೇಗೌಡರ ಆಶಯ ರೈತರ ಸರ್ಕಾರ ನೋಡಬೇಕು ಎಂಬುದು. ರಾಜ್ಯದಲ್ಲಿ ಕುಮಾರಣ್ಣನ ಸರ್ಕಾರ ಬರಬೇಕು. ನಮ್ಮ ಫ್ಯಾಮಿಲಿ ದೇವೇಗೌಡರ ಜೊತೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.