ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಬಜರಂಗಸೇನೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.
ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರವನ್ನು ಕೆಡವಿ ಆ ಜಾಗದಲ್ಲಿ ಟಿಪ್ಪು ಮಸೀದಿ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಸೀದಿ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸುವಂತೆ ಹಿಂದೂಪರ ಸಂಘಟನೆಗಳು, ಬಜರಂಗಸೇನೆ ಒತ್ತಾಯಿಸಿತ್ತು. ಹಲವು ದಿನಗಳಾದರೂ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ.
ಈ ಬಗ್ಗೆ ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದು, ಹಿಂದೂಗಳಲ್ಲಿ ದೈವಿಕಾರ್ಯದಲ್ಲಿ 108 ಶ್ರೇಷ್ಠ ಸಂಖ್ಯೆ. ಹಾಗಾಗಿ 108 ಬಜರಂಗಸೇನೆ ಕಾರ್ಯಕರ್ತರಿಂದ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು. ಇಲ್ಲಿ ಹನುಮ ದೇವರನ್ನೇ ಪ್ರತಿವಾದಿಯನ್ನಾಗಿ ಮಾಡಲಾಗುವುದು. ಇದೊಂದು ದೈವಿಕಾರ್ಯ. ನಮ್ಮ ದೇವರ ಪೂಜೆ ಪುನಸ್ಕಾರಕ್ಕಾಗಿ ದೇವಸ್ಥಾನದ ಜಾಗವನ್ನು ನಾವು ವಾಪಸ್ ಪಡೆಯುವ ನಿಟ್ಟಿನಲ್ಲಿ ಕೇಳುತ್ತಿದೇವೆ. ಜಾಮಿಯಾ ಮಸೀದಿ ಸ್ಥಳದಲ್ಲಿ ದೇವಾಲಯವಿದ್ದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಲ್ಲಾ ದಾಖಲೆಗಳ ಸಮೇತ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.