ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಓರ್ವ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. ಕಾಶ್ಮೀರ ಫ್ರೀಡಂ ಫೈಟರ್ಸ್ ಎಂಬ ಭಯೋತ್ಪಾದಕ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಹತ್ಯೆಯಾದ ಸುರಿಂದರ್ ಕುಮಾರ್ ಸಿಂಗ್, ಕುಲ್ಗಾಂನ ಕಕ್ರನ್ ಪ್ರದೇಶದ ನಿವಾಸಿ.
ನಿನ್ನೆ ಸಂಜೆ ವೇಳೆಗೆ ಭಯೋತ್ಪಾದಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದ್ರೆ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದರಿಂದ ಸುರಿಂದರ್ ಮೃತಪಟ್ಟಿದ್ದಾರೆ.
ಘಟನೆ ಬೆನ್ನಲ್ಲೇ ಭಯೋತ್ಪಾದಕರನ್ನು ಸೆರೆಹಿಡಿಯಲು ಅಧಿಕಾರಿಗಳು ಆ ಪ್ರದೇಶವನ್ನು ಸುತ್ತುವರಿದಿದ್ದಾರೆ. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಈ ದಾಳಿಯನ್ನು ಖಂಡಿಸಿದ್ದಾರೆ. ಹತ್ಯೆಯಾದ ಸುರಿಂದರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಕೃತ್ಯ ಎಸಗಿದ ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಕಾದಿದೆ ಅಂತಾ ಎಚ್ಚರಿಸಿದ್ದಾರೆ.
ಈ ಘಟನೆಗೂ ಮುನ್ನ ಲಷ್ಕರ್ ಇ ಇಸ್ಲಾಂ ಸಂಘಟನೆ ಎಚ್ಚರಿಕೆಗಳುಳ್ಳ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು. ಕಣಿವೆಯಲ್ಲಿರುವ ಅಲ್ಪಸಂಖ್ಯಾತ ಗುಂಪುಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗಿದೆ. ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದರು.