ಸಿಂದಗಿ: ಉಪಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಗ್ದಾಳಿ ಎಲ್ಲೆ ಮೀರಿದ್ದು, ಒಬ್ಬರ ಹೇಳಿಕೆಗೆ ಮತ್ತೊಬ್ಬರು ತಿರುಗೇಟು ನೀಡುವ ಬರದಲ್ಲಿ ನಾಲಿಗೆ ಹರಿ ಬಿಡುತ್ತಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದ ಶಾಸಕ ಜಮೀರ್ ಅಹ್ಮದ್ ಕುಮಾರಸ್ವಾಮಿ ಆರ್.ಎಸ್.ಎಸ್ ಚಡ್ಡಿ ಹಾಕಿರಬಹುದು ಎಂದು ಹೇಳಿಕೆ ನೀಡಿದ್ದರು. ಜಮೀರ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ಜಮೀರ್ ಮೊದಲು ನೆಟ್ಟಗೆ ಒಂದು ಪಕ್ಷದಲ್ಲಿ ನಿಲ್ಲಲು ಕಲಿಯಲಿ. ಆ ಮೇಲೆ ಯಾರ್ಯಾರು ಏನು ಹಾಕಿದ್ದಾರೆ ಎಂಬುದನ್ನು ನೋಡೋಣ ಎಂದು ಗುಡುಗಿದ್ದಾರೆ.
ಜಮೀರ್ ಅಹ್ಮದ್ ಒಂದು ಪಕ್ಷದಲ್ಲಿ ನಿಷ್ಠೆ ಇಲ್ಲದ ವ್ಯಕ್ತಿ. ಅಂತಹವರಿಗೆ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮೊದಲು ಜಮೀರ್ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಮಾತಿಗೂ ಒಂದು ಮಿತಿಯಿರಬೇಕು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಿದೆ. ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಇಬ್ಭಾಗವಾಗಲಿದೆ. ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ.ಕೆ.ಶಿವಕುಮಾರ್ ಬಣ. ಇಬ್ಬರೂ ನಾಯಕರು ಒಂದೇ ಪಕ್ಷದಲ್ಲಿ ಇರಲ್ಲ ಎಂದು ಭವಿಷ್ಯ ನುಡಿದರು.
ಬಿಜೆಪಿ ನಾಯಕರಿಗೆ ಕಂಬಳಿ ಹಾಕಿಕೊಳ್ಳುವ ಯೋಗ್ಯತೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕನಕದಾಸರು, ಸಂಗೊಳ್ಳಿ ರಾಯಣ್ಣ ಮಹಾಪುರುಷರು ಕಂಬಳಿ ಹಾಕಿದ್ದರು. ಕಂಬಳಿ ಪವಿತ್ರವಾದ ಸಂಕೇತ. ಕಂಬಳಿಯನ್ನು ರಾಜಕಾರಣಕ್ಕೆ ತರಬೇಡಿ. ಕನಕದಾಸರ ಹೆಸರು ಹೇಳಲು ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.