ಬೆಂಗಳೂರು: ತಮ್ಮ ಸರ್ಕಾರದ ವೈಫಲ್ಯಗಳೇ ಮುಖ್ಯಮಂತ್ರಿಗಳ ನಿದ್ದೆಗೆಡುವಂತೆ ಮಾಡಿದೆ. ಜನರಿಗೆ ನಿದ್ದೆಗೆಡುವಂತ ಆಡಳಿತ ನೀಡಿದಾಗ ಜನರೂ ಸರ್ಕಾರದ ನಿದ್ದೆಗೆಡಿಸುತ್ತಾರೆ ಎನ್ನಲು ಮಧ್ಯರಾತ್ರಿಯ ಪತ್ರಿಕಾಗೋಷ್ಠಿಯೇ ಸಾಕ್ಷಿ ಎಂದು ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಜನೋತ್ಸವವನ್ನು ರದ್ದುಗೊಳಿಸಿದ್ದು ಜನಾಕ್ರೋಶದ ಕಾರಣಕ್ಕೆ ಹೊರತು ಮೃತನ ಮೇಲಿನ ಗೌರವದಿಂದಲ್ಲ. ಮಧ್ಯರಾತ್ರಿಯ ಯೂಟರ್ನ್ ಗಳ ವೃತ್ತಾಂತಗಳು ಬಿಜೆಪಿ ಸರ್ಕಾರಕ್ಕೆ ಹೊಸದೇನೂ ಅಲ್ಲ. ಸರ್ಕಾರಿ ಕಚೇರಿಗಳಲ್ಲಿನ ಚಿತ್ರೀಕರಣ ವಿಷಯದಲ್ಲೂ ಸರ್ಕಾರ ಹೀಗೆಯೇ ಯೂಟರ್ನ್ ಗಳಾಗಿ ರಾತ್ರಿಯವರೆಗೂ ಕಾದಿತ್ತು. ಬಹುಶಃ ಈ ಸರ್ಕಾರಕ್ಕೆ ಜ್ಞಾನೋದಯವಾಗಲು ರಾತ್ರಿಯೇ ಆಗಬೇಕೇನೋ! ಎಂದು ಸರಣಿ ಟ್ವೀಟ್ ಮೂಲಕ ಗುಡುಗಿದೆ.
ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ ಈ ಸರ್ಕಾರಕ್ಕೆ. ಸರ್ಕಾರದ ‘ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂಬ ಮಾತಿನ ಅಸಲಿ ಅರ್ಥ. ಜೈಲಿನಲ್ಲಿ ಗಾಂಜಾ ವ್ಯವಸ್ಥೆ ಮಾಡುತ್ತೇವೆ, ಮೊಬೈಲ್ ನೀಡುತ್ತೇವೆ, ಬಿರಿಯಾನಿ ನೀಡುತ್ತೇವೆ ಮೋಜು ಮಸ್ತಿಗೆ ಸುವ್ಯವಸ್ಥೆ ಮಾಡಿಕೊಡುತ್ತೇವೆ! ಸರ್ಕಾರದ ಅಸಾಮರ್ಥ್ಯವನ್ನು ಸ್ವತಃ ಅವರ ಕಾರ್ಯಕರ್ತರೇ ಅರ್ಥ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದೆ.