ರಾಯಚೂರು: ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಸಾರಿಗೆ ಸಚಿವ ಶ್ರೀರಾಮುಲು ಆಡಿದ ಕೆಲ ಮಾತುಗಳು ಜನಾರ್ಧನ ರೆಡ್ಡಿ ಹೊಸ ಪಕ್ಷ ರಚನೆ ನಿರ್ಧಾರ ಬಹುತೇಕ ಖಚಿತವೇ ಎಂಬ ಕುತೂಹಲ ಇಮ್ಮಡಿಗೊಳಿಸುವಂತೆ ಮಾಡಿದೆ.
ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಜನಾರ್ಧನ ರೆಡ್ಡಿ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ತೀರ್ಮಾನಿಸಿರುವ ಬಗ್ಗೆ ಕಳೆದ ಬಾರಿ ನನ್ನ ಗಮನಕ್ಕೆ ಬಂದಿದೆ. ರೆಡ್ಡಿ ನನ್ನ ಬಳಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಹಿರಿಯರಿಗೆ ನಾನು ಏನನ್ನು ತಿಳಿಸಬೇಕೋ ಅದನ್ನು ತಿಳಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದರು.
ಸಮಯಾವಕಾಶ ಸಿಗದ ಕಾರಣ ಜನಾರ್ಧನ ರೆಡ್ಡಿ ಭೇಟಿ ಸಾಧ್ಯವಾಗಿಲ್ಲ. ಶೀಘ್ರದಲ್ಲಿ ರೆಡ್ಡಿ ಭೇಟಿಯಾಗಿ ಚರ್ಚಿಸುತ್ತೇನೆ. ಏನು ನೋವಾಗಿದೆ ಎಂಬುದನ್ನು ಕೇಳುತ್ತೇನೆ. ಸ್ನೇಹ ಅಂತಾ ಬಂದಾಗ ಎಲ್ಲಾ ಪಕ್ಷದವರೂ ಒಂದೇ. ಪಕ್ಷ ಅಂತ ಬಂದಾಗ ಭಿನ್ನಾಭಿಪ್ರಾಯ ಸಹಜ. ಜನಾರ್ಧನ ರೆಡ್ಡಿ ನನಗೆ ಅತ್ಯಂತ ಆತ್ಮೀಯ ಸ್ನೇಹಿತ. ಸ್ನೇಹ ಹಾಗೂ ಪಾರ್ಟಿ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದರು.