ರಾಯಪುರ್: ಜನಸಂಖ್ಯೆ ನಿಯಂತ್ರಣಕ್ಕೆ ಶೀಘ್ರದಲ್ಲೇ ಕಾನೂನು ತರಲಾಗುವುದು ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.
ಬರೋಂಡಾದ ICAR-ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಮ್ಯಾನೇಜ್ ಮೆಂಟ್‌ನಲ್ಲಿ ‘ಗರೀಬ್ ಕಲ್ಯಾಣ್ ಸಮ್ಮೇಳನ’ದಲ್ಲಿ ಭಾಗವಹಿಸಲು ರಾಯ್ ಪುರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನಿನ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಶೀಘ್ರದಲ್ಲೇ ಜನಸಂಖ್ಯೆ ನಿಯಂತ್ರಣ ಕಾನೂನು ತರಲಾಗುವುದು ಎಂದರು.
ಛತ್ತೀಸ್ ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರದ ಕೆಲವು ಯೋಜನೆಗಳ ಅಡಿಯಲ್ಲಿ ಗುರಿ ಸಾಧಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜಲ ಜೀವನ್ ಮಿಷನ್ ಅಡಿಯಲ್ಲಿ ಕೇವಲ ಶೇ. 23 ರಷ್ಟು ಕೆಲಸ ನಡೆದಿದೆ. ರಾಷ್ಟ್ರಮಟ್ಟದಲ್ಲಿ ಗುರಿ ಸಾಧನೆಯ ರಾಷ್ಟ್ರೀಯ ಸರಾಸರಿ ಶೇ. 50 ರಷ್ಟು ಇದೆ ಎಂದ ಅವರು, ರಾಜ್ಯದಲ್ಲಿ ಜಲಮೂಲಗಳ ಸಮಸ್ಯೆ ಇಲ್ಲ. ಆದರೆ, ನಿರ್ವಹಣೆಯದ್ದೇ ಸಮಸ್ಯೆಯಾಗಿದೆ. ಅದೇ ರೀತಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗುರಿಯನ್ನು ಪೂರ್ಣಗೊಳಿಸಲು ರಾಜ್ಯಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.