ಮೈಸೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬೆನ್ನಲ್ಲೇ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಮುಖಂಡರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ.
ಇದೀಗ ಬಿಜೆಪಿ ಶಾಸಕ ಹರ್ಷವರ್ಧನ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಜನರ ಜೀವ ಉಳಿಸಲು ಆಗದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು ಎಂದು ಪ್ರಶ್ನಿಸಿದ್ದಾರೆ.
ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು, ಸರ್ಕಾರ ಇರಲು ಅದರ ಹಿಂದೆ ನಮ್ಮ ಕಾರ್ಯಕರ್ತರ ಶ್ರಮದ ಬೆವರಿದೆ. ಸಾಲು ಸಾಲು ಕಾರ್ಯಕರ್ತರೇ ಇಂದು ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಜನರು ಅಭದ್ರತೆಯಲ್ಲಿ ಬದುಕುವ ಸ್ಥಿತಿ ಬಂದಿದೆ. ಜನರನ್ನು ರಕ್ಷಿಸಲು ಆಗದ ಸರ್ಕಾರ ಯಾಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇರಳದ ಗಡಿ ಭಾಗ ಬೆಳ್ಳಾರೆಯಲ್ಲಿ ಹತ್ಯೆ ನಡೆದಿದೆ ನಾಳೆ ರಾಜ್ಯದ ಇನ್ನೂ ಹಲವು ಜಿಲ್ಲೆಗಳ ಗಡಿ ಭಾಗದ ಕಥೆಯೇನು…? ನಂಜನಗೂಡು, ಗುಂಡ್ಲುಪೇಟೆ ಕೂಡ ಗಡಿ ಪ್ರದೇಶವೇ ಆಗಿದೆ. ಮೊದಲು ಸರ್ಕಾರ ದುಷ್ಟ ಶಕ್ತಿಗಳನ್ನು ಸಮರ್ಥವಾಗಿ ಮಟ್ಟಹಾಕಬೇಕು ಎಂದು ಆಗ್ರಹಿಸಿದರು.