ಇಂದು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಮನೆಮಾಡಿದೆ. ಕಲಬುರ್ಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.
ನಮ್ಮ ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿದೆ. ಈ ಭಾಗವನ್ನು ಹಸಿರು ಪ್ರದೇಶ ಮಾಡಲು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಬೀದರ್ ನಿಂದ ಬಳ್ಳಾರಿಯವರೆಗೂ ಫೋರ್ ವೇ ಲೈನ್ ನಿರ್ಮಾಣವಾಗಲಿದೆ. ರಾಯಚೂರು, ಕೊಪ್ಪಳದಲ್ಲಿಯೂ ಯೋಜನೆ ಜಾರಿಗೆ ಬರಲಿದೆ. ಕಲಬುರ್ಗಿ ಅಭಿವೃದ್ಧಿಗಾಗಿ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕಲಬುರ್ಗಿ ನಗರ ಭವಿಷ್ಯದ ಅಭಿವೃದ್ಧಿ ನಗರ. ಕಲಬುರ್ಗಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಕನಸು ಹೊಂದಿದ್ದೇವೆ. ಕೆ ಆರ್ ಡಿ ಬಿ ಗೆ 1500 ಕೋಟಿ ಬಿಡುಗಡೆ ಮಾಡಲಾಗಿದೆ. 2100 ಹೊಸ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುತ್ತೇವೆ. ಎಲ್ಲಾ ಸರ್ಕಾರಿ ಶಾಲೆಗಳಿಗೂ ಮುಂದಿನ ಆ. 15ರೊಳಗೆ ಶೌಚಾಲಯ ನಿರ್ಮಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಬೇಕು. ಹಾಗಾಗಿ ಅಮೃತ ಮಹೋತ್ಸವ ಮಾಡುತ್ತಿದ್ದೇವೆ ಎಂದು ಹೇಳಿದರು.