ಉನ್ನತ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿ ಕುರಿತಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಕೊಲಿಜಿಯಂ ಕಳುಹಿಸಿದ್ದ 20 ಹೆಸರುಗಳ ಕಡತವನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದ್ದು, ಇವುಗಳನ್ನು ಮರುಪರಿಶೀಲಿಸುವಂತೆ ಕೋರಿದೆ ಎನ್ನಲಾಗಿದೆ.
ಇದರ ಮಧ್ಯೆ ಜಡ್ಜ್ ನೇಮಕಾತಿ ವಿಳಂಬ ಕುರಿತಂತೆ ಗರಂ ಆಗಿರುವ ಸುಪ್ರೀಂ ಕೋರ್ಟ್, ಕಾಲಮಿತಿಯಲ್ಲಿ ನ್ಯಾಯಾಧೀಶರ ನೇಮಕ ಮಾಡದಿರುವ ಕಾರಣ ವ್ಯವಸ್ಥೆ ಕೆಡುತ್ತದೆ ಎಂದು ಹೇಳಿದೆ. ಅಲ್ಲದೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿ ಕೊಲಿಜಿಯಂ ಕುರಿತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆಡಿದ ಮಾತುಗಳಿಗೂ ಆಕ್ಷೇಪ ವ್ಯಕ್ತಪಡಿಸಿದೆ.
ಕಾಲಮಿತಿಯೊಳಗೆ ನ್ಯಾಯಾಧೀಶರ ನೇಮಕ ಆಗಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದ್ದು, ಕೊಲಿಜಿಯಂ ಎರಡನೇ ಬಾರಿ ಶಿಫಾರಸ್ಸು ಮಾಡಿದರೆ ಅದನ್ನು ಸರ್ಕಾರ ಒಪ್ಪಬೇಕು ಎಂದು ತಿಳಿಸಿದೆ. ಅಲ್ಲದೆ ಈ ಹಿಂದೆ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶ ಪಾಲನೆ ಆಗಬೇಕು ಎಂದು ಹೇಳಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ನಿಗದಿಪಡಿಸಿದೆ.