ಸ್ಟಾರ್ಬಕ್ಸ್ ಕಂಪನಿ, ಲಕ್ಷ್ಮಣ ನರಸಿಂಹನ್ ಅವರನ್ನು ಹೊಸ ಸಿಇಓ ಆಗಿ ನೇಮಕ ಮಾಡಿದೆ. ಈ ಮೂಲಕ ವಿಶ್ವದ ಅತಿ ದೊಡ್ಡ ಕಾಫಿ ಸಂಸ್ಥೆಯ ಹೊಣೆಯನ್ನು ಭಾರತೀಯನಿಗೆ ವಹಿಸಿದೆ. ಈ ಜವಾಬ್ಧಾರಿಯೊಂದಿಗೆ ಚೀನಾದಲ್ಲಿ ಹೆಚ್ಚುತ್ತಿರುವ ಚಳುವಳಿಯ ಕಾವು, ಏರುತ್ತಿರುವ ಹಣದುಬ್ಬರ ಮತ್ತು ಸಂಸ್ಥೆ ಎದುರಿಸುತ್ತಿರುವ ನಷ್ಟ ಇಷ್ಟೆಲ್ಲ ಸವಾಲುಗಳು ಕೂಡ ಲಕ್ಷ್ಮಣ ನರಸಿಂಹನ್ ಅವರ ಹೆಗಲೇರಿದೆ.
ದೀರ್ಘಕಾಲದಿಂದ ಸ್ಟಾರ್ಬಕ್ಸ್ ಹೊಣೆ ಹೊತ್ತಿದ್ದ ಹೊವಾರ್ಡ್ ಅವರಿಂದ ಎಪ್ರಿಲ್ನಲ್ಲಿ ನರಸಿಂಹನ್ ಅಧಿಕಾರ ಸ್ವೀಕರಿಸಲಿದ್ದಾರೆ. ಕಳೆದ ಎಪ್ರಿಲ್ನಲ್ಲಿ ಕೆವಿನ್ ಜಾನ್ಸನ್, ಸ್ಟಾರ್ಬಕ್ಸ್ ಸಿಇಓ ಸ್ಥಾನದಿಂದ ಕೆಳಗಿಳಿದಿದ್ದರು. ನಂತರ ಹೊವಾರ್ಡ್ ಅಧಿಕಾರ ವಹಿಸಿಕೊಂಡಿದ್ದರು.
“ನಾವು ನಮ್ರತೆಯ ಆಳವಾದ ಅರ್ಥವನ್ನು ಹೊಂದಿರುವ ನಿಜವಾದ ಸೇವಕನನ್ನು ನಾಯಕನನ್ನು ಹುಡುಕುತ್ತಿದ್ದೇವೆ, ಅವರಲ್ಲಿ ಲಕ್ಷ್ಮಣ್ ಮೊದಲ ಮತ್ತು ಅಗ್ರಗಣ್ಯರು, ನಿಜವಾದ ಸೇವಕ ನಾಯಕ” ಎಂದು ಹೊವಾರ್ಡ್ ಬಣ್ಣಿಸಿದ್ದಾರೆ. 55ರ ಹರೆಯದ ನರಸಿಂಹನ್, ಕಾರ್ಪೊರೇಟ್ ಜಗತ್ತಿನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಸುಮಾರು 35,000 ಮಳಿಗೆಗಳು, 3,83,000ಕ್ಕೂ ಅಧಿಕ ಉದ್ಯೋಗಿಗಳನ್ನು ನಿಭಾಯಿಸಿದ ಹೆಮ್ಮೆ ಅವರದ್ದು.
ಪೆಪ್ಸಿಕೋನಲ್ಲಿ ಅವರು ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸಿದ್ದರು. ಡ್ಯುರೆಕ್ಸ್ ಕಾಂಡೋಮ್ಸ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸಿದ್ದಾರೆ. ಪುಣೆಯಲ್ಲಿ ಜನಿಸಿದ ನರಸಿಂಹನ್, 1991ರಲ್ಲೇ ಅಮೆರಿಕಕ್ಕೆ ತೆರಳಿದ್ರು. ಅಲ್ಲೇ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ. 2012ರಲ್ಲಿ ಪೆಪ್ಸಿಕೋದ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ನೇಮಕಗೊಂಡಿದ್ದರು.
ಸ್ಟಾರ್ಬಕ್ಸ್ ಸಿಇಓ ಆಗಿ ನರಸಿಂಹನ್ ಅಧಿಕಾರ ಸ್ವೀಕರಿಸಿದ ಬಳಿಕ ಅವರಿಗೆ ಸಲಹೆಗಾರರಾಗಿ ಹೊವಾರ್ಡ್ ಕಾರ್ಯ ನಿರ್ವಹಿಸಲಿದ್ದಾರೆ. ಉದ್ಯೋಗಿಗಳ ಹೆಚ್ಚಿನ ವೇತನ ಬೇಡಿಕೆ ಹಾಗೂ ಸುಸಜ್ಜಿತ ವ್ಯವಸ್ಥೆಗಾಗಿ ಒತ್ತಾಯಿಸಿದ್ದರಿಂದ ಸ್ಟಾರ್ಬಕ್ಸ್ ಚಳುವಳಿಯ ಕೇಂದ್ರಬಿಂದುವಾಗಿದೆ. ಅಮೆರಿಕದಲ್ಲಿ 230 ಸ್ಟಾರ್ಬಕ್ಸ್ ಮಳಿಗೆಗಳಿದ್ದು, ಜಗತ್ತಿನಾದ್ಯಂತ ಸುಮಾರು 9000 ಮಳಿಗೆಗಳನ್ನು ಹೊಂದಿದೆ.