ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ಮೊದಲ ಬಜೆಟ್ ಮೇಲಿನ ಚರ್ಚೆ ವೇಳೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹಾಸ್ಯಾತ್ಮಕವಾಗಿ ಮಾತನಾಡಿದ್ದಾರೆ.
ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಬಗ್ಗೆ ಅಭಿಮಾನವಿದೆ. ಸಂತೋಷದಿಂದ ಸ್ವಾಗತಿಸುತ್ತೇನೆ. ಇದೊಂದು ರೀತಿ ಚೊಚ್ಚಲ ಹೆರಿಗೆ ಆದಂತಾಗಿದೆ. ಮೊದಲ ಹೆರಿಗೆ, ಮಗು ಆರೋಗ್ಯವಾಗಿದೆ. ಈ ಮಗು ನಮ್ಮ ಬಳಿ ಇದ್ದರೆ ನಗುತ್ತೆ, ಕಾಂಗ್ರೆಸ್ ಬಳಿ ಹೋದರೆ ಅಳುತ್ತೆ, ಜೆಡಿಎಸ್ ಈ ಮಗುವನ್ನು ತಮ್ಮದು ಎಂದು ಆಟವಾಡಿಸುತ್ತಿದೆ. ಮರಿತಿಬ್ಬೇಗೌಡರ ಬಳಿ ಹೋದರೆ ಕಿಟಾರ್ ಅಂತ ಕಿರುಚುತ್ತೆ ಎಂದು ಹಾಸ್ಯ ಚಟಾಕಿ ಬೀರಿದ್ದಾರೆ.
ಇದೇ ವೇಳೆ ವಿಪಕ್ಷನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ವೋಟಿಗಾಗಿ ತಮ್ಮನ್ನು ಮತ್ತೊಮ್ಮೆ ಸಿಎಂ ಮಾಡಿದರೆ 10 ಕೆಜಿ ಅಕ್ಕಿ ಕೊಡ್ತೀನಿ ಅಂತಿದ್ದಾರೆ ಎಂದರು.
ಕನ್ನಡ ಭಾಷೆಯನ್ನೇ ಕೊಂದು ಹಾಕಿದ್ದಾರೆ…ಧಮ್ ಇದ್ಯಾ ಎಂದು ಮಾತು ಆರಂಭಿಸ್ತಾರೆ.. ಏಯ್… ಮೋದಿ ಯೂಸ್ ಲೆಸ್ ಫೆಲೋ ಅಂತಾರೆ ಇದು ಭಾಷೆನಾ? ಓರ್ವ ಚುನಾಯಿತ ಪ್ರತಿನಿಧಿಗೆ ಕೊಡೊ ಗೌರವನಾ? ಪ್ರಧಾನಿ ಮೋದಿ ಮೂರು ಬಾರಿ ಸಿಎಂ ಆಗಿದ್ದರು, ಎರಡು ಭಾರಿ ಪ್ರಧಾನಿ ಆಗಿದ್ದಾರೆ. ಒಂದು ಬಾರಿ ಸಿಎಂ ಆಗಿ 36 ಸಾವಿರ ವೋಟ್ ನಿಂದ ಸೋತವರು ಮೂರು ಬಾರಿ ಗೆದ್ದವರ ಬಗ್ಗೆ ಮಾತನಾಡುವ ರೀತಿ ಇದೇನಾ? ಎಂದು ಕಿಡಿಕಾರಿದರು.
ಪ್ರಧಾನಿಯಾಗಿ ಮೋದಿ ಯಾವತ್ತೂ ಹಿಂದುತ್ವದ ಬಗ್ಗೆ ಮಾತಾಡಿಲ್ಲ, 2 ಕೋಟಿ ಮುಸ್ಲೀಂ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಟ್ಟಿದ್ದಾರೆ. ಜಲ ಜೀವನ್ ಮಿಷನ್ ನಂತಹ ಬೃಹತ್ ಯೋಜನೆ ನೀಡಿದ್ದಾರೆ ಆದರೆ ವಿಪಕ್ಷ ಇದರ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಬಿಜೆಪಿ ಬಗ್ಗೆ ಆರೋಪ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.