ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಮುರುಘ ಶ್ರೀಗಳು. ಶ್ರೀಗಳು ಜೈಲು ಪಾಲಾದ ದಿನದಿಂದ ಮಠದ ಸಿಬ್ಬಂದಿಗೆ ಸಂಬಳದ ಸಮಸ್ಯೆಯಾಗಿದೆ. ಅಷ್ಟೆ ಅಲ್ಲ ಮಠದ ಒಂದಿಷ್ಟು ಹಣಕಾಸಿನ ಕೆಲಸಗಳಿಗೂ ತೊಂದರೆಯಾಗಿದೆ. ಮಠದ ಸಿಬ್ಬಂದಿಗೆ ಸಂಬಳ ನೀಡಬೇಕು. ಹೀಗಾಗಿ ಜೈಲಿನಿಂದಲೇ ಚೆಕ್ ಗೆ ಸಹಿ ಹಾಕಲು ಅವಕಾಶ ಕೊಡಿ ಎಂದು ಕೋರ್ಟ್ ಗೆ ಮನವಿ ಮಾಡಿದ್ದರು.
ಈ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಮೂರು ದಿನಗಳ ಕಾಲ ಚೆಕ್ ಗೆ ಸಹಿ ಹಾಕುವಂತೆ ಅನುಮತಿ ನೀಡಿದೆ. ಒಂದು ಬಾರಿಗೆ ಸಹಿ ಹಾಕಲು ಅನುಮತಿ ನೀಡಿ ಅಂತ ಶ್ರೀಗಳ ಪರ ವಕೀಲರು ಮನವಿ ಮಾಡಿದ್ದರು. ಹೀಗಾಗಿ ಅಕ್ಟೋಬರ್ 3,6,10 ರಂದು ಸಹಿ ಹಾಕಲು ಷರತ್ತು ಬದ್ದ ಅನುಮತಿ ನೀಡಿದ್ದಾರೆ.
ಈ ವೇಳೆ ಕೋರ್ಟ್ ಒಂದು ಅಭಿಪ್ರಾಯವನ್ನೂ ಹೇಳಿದೆ. ಕೆಲಸಗಾರರು ಸಂಬಳ ಇಲ್ಲದೆ ಪರದಾಡಬಾರದು ಎಂಬ ನಿಟ್ಟಿನಲ್ಲಿ ಈ ತಾತ್ಕಾಲಿಕ ಅವಕಾಶ ಕೊಡಲಾಗಿದೆ ಎಂದಿದ್ದಾರೆ. ಇನ್ನು ಈ ಚೆಕ್ ಗಳ ವಿವರವನ್ನು ತನಿಖಾಧಿಕಾರಿಗೆ ನೀಡಬೇಕು. ಈ ವಿವರವನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿರುವ ಕೋರ್ಟ್ ಗೆ ಒಪ್ಪಿಸಬೇಕು ಎಂದಿದೆ ಕೋರ್ಟ್.