ಬೆಂಗಳೂರು: ಕಾಂಗ್ರೆಸ್ ಪಕ್ಷ ಅರಾಜಕತೆಯ ಸೃಷ್ಟಿಕರ್ತ. ರಾಹುಲ್ ಗಾಂಧಿಯವರು ನೇಪಾಳಕ್ಕೆ ಹೋಗಿ ಯಾರನ್ನು ಭೇಟಿಯಾದ್ರು? ಏನ್ ಮಾಡಿದರು? ದೇಶ ವಿರೋಧಿ ಚೀನಾ ಜತೆ ಸ್ನೇಹ ಮಾಡ್ತಿದ್ದಾರಾ? ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಲಿ, ಡಿಕೆಶಿಯಾಗಲಿ ಯಾಕೆ ಮಾತನಾಡದೇ ಮೌನವಾಗಿದ್ದಾರೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ನಾಯಕರು ಇಲ್ಲವಾಗಿದ್ದಾರೆ. ಈಗಾಗಲೇ ಪಕ್ಷ ಐಸಿಯುಗೆ ಹೋಗಿದ್ದು, ಚುನಾವಣೆಗೂ ಮೊದಲೇ ಸತ್ತು ಹೋಗಲಿದೆ ಎಂದು ವ್ಯಂಗ್ಯವಾಡಿದರು.
113 ಕ್ಕೂ ಅಧಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್
ಸಿದ್ದರಾಮಯ್ಯನವರದ್ದು ಒಂದು ಟೀಂ ಆದ್ರೆ, ಡಿ.ಕೆ. ಶಿವಕುಮಾರ್ ಅವರದ್ದು ಒಂದು ಟೀಂ. ಕಾಂಗ್ರೆಸ್ ಪಕ್ಷ ಅವ್ಯವಸ್ಥೆ ಆಗರವಾಗಿದೆ. ಪಕ್ಷ ಕಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನು ನಾಡನ್ನು ಹೇಗೆ ಕಟ್ಟುತ್ತಾರೆ? ಭ್ರಷ್ಟಾಚಾರ, ಭಯೋತ್ಪಾದನೆ, ಕುಟುಂಬ ರಾಜಕಾರಣ ಕಾಂಗ್ರೆಸ್ ಕೊಡುಗೆ. ಆದರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ಸ್ಥಾನಕ್ಕೇರಬಲ್ಲ. ಚಹಾ ಮಾರುವ ಹುಡುಗ ದೇಶದ ಪ್ರಧಾನಿಯಾಗಬಲ್ಲ ಎಂದು ತೋರಿಸಿಕೊಟ್ಟ ಪಕ್ಷ ನಮ್ಮದು ಎಂದರು.
ಪರಿವಾರ ವಾದ ನಮ್ಮದಲ್ಲ. ಹಣಬಲದಿಂದಲೂ ನಾವು ಬಂದಿಲ್ಲ. ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆಯಿಂದ ರಾಜಕೀಯಕ್ಕೆ ಬಂದಿದ್ದೇವೆ. ರಾಮರಾಜ್ಯ, ರಾಮ ಭಾರತ ಆಗಬೇಕು ಎಂದರೆ ಪ್ರತಿಯೊಬ್ಬ ವ್ಯಕ್ತಿ ರಾಮನಾಗಬೇಕು. ವ್ಯಕ್ತಿ ನಿರ್ಮಾಣದಿಂದ ಮಾತ್ರ ದೇಶ ನಿರ್ಮಾಣ ಕಾರ್ಯ ಸಾಧ್ಯ ಎಂದು ಹೇಳಿದರು.