ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಆದರೆ ಆಡಳಿತರೂಢ ಬಿಜೆಪಿ ಈವರೆಗೂ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಇದರ ಮಧ್ಯೆ ಅಭ್ಯರ್ಥಿಗಳ ಆಯ್ಕೆಗಾಗಿ ಇದೇ ಮೊದಲ ಬಾರಿಗೆ ಹೊಸ ವಿಧಾನವೊಂದನ್ನು ಬಿಜೆಪಿ ಆರಂಭಿಸಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂವರು ಸಂಭಾವ್ಯ ಅಭ್ಯರ್ಥಿಗಳನ್ನು ಹೆಸರನ್ನು ಸೂಚಿಸುವಂತೆ ಕಾರ್ಯಕರ್ತರಿಗೆ ತಿಳಿಸಲಾಗಿದ್ದು, ಶುಕ್ರವಾರದಂದು ಈ ಆಂತರಿಕ ಚುನಾವಣೆ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕ ಕಾಲದಲ್ಲಿ ನಡೆದಿದೆ. ಇದರಲ್ಲಿ ಒಟ್ಟು 18,000 ಕಾರ್ಯಕರ್ತರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಮಹತ್ವದ ಸಂಗತಿ ಎಂದರೆ ಮೂವರು ಸಂಭಾವ್ಯ ಅಭ್ಯರ್ಥಿಗಳ ಕುರಿತು ಮತ ಚಲಾವಣೆ ಮಾಡಿದ ಕಾರ್ಯಕರ್ತರು ತಮ್ಮದೇ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿತ್ತು. ಮತ ಚಲಾವಣೆ ಮಾಡುವ ಕಾರ್ಯಕರ್ತರಿಗೆ ಬಿಜೆಪಿ ನಾಯಕರು ಅಭ್ಯರ್ಥಿಗಳ ಯಾವುದೇ ಹೆಸರನ್ನು ಸೂಚಿಸಿರಲಿಲ್ಲ. ಮೂವರು ಸಂಭಾವ್ಯರನ್ನು ಪ್ರಾಶಸ್ತ್ಯ ಮತದ ರೂಪದಲ್ಲಿ ಹೆಸರನ್ನು ದಾಖಲಿಸುವಂತೆ ಸೂಚಿಸಲಾಗಿತ್ತು.