ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಎರಡು ದಿನಗಳು ಬಾಕಿ ಇದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹೊಸ ಜವಾಬ್ದಾರಿ ನೀಡಿದೆ.
ಮಾರ್ಚ್ 10ರಂದು ಗೋವಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಶಾಸಕರ ರಕ್ಷಣೆ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಶಿವಕುಮಾರ್ ಗೋವಾಗೆ ತೆರಳಿದ್ದು, ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯುವಂತೆ ಹೇಳಲಾಗಿದೆ. ಗೋವಾ ಫಲಿತಾಂಶದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬ ಸಮೀಕ್ಷೆ ವರದಿ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಜವಾಬ್ದಾರಿ ವಹಿಸಲಾಗಿದೆ.
ಫಲಿತಾಂಶ ಹೊರಬರುವವರೆಗೂ ಗೋವಾದಲ್ಲಿಯೇ ಇದ್ದು, ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಅದರ ಲಾಭ ಪಡೆದು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೈಕಮಾಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ.