ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಮಿತಿಮೀರಿದೆ. ಕಳೆದ 24 ಗಂಟೆಗಳಲ್ಲಿ 16,412 ಸೋಂಕಿತರು ಪತ್ತೆಯಾಗಿದ್ದಾರೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಚೀನಾದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ರೋಗಿಗಳು ಪತ್ತೆಯಾಗಿದ್ದು ಇದೇ ಮೊದಲು.
ಶಾಂಘೈ ನಗರವಂತೂ ಕೋವಿಡ್ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಆರ್ಥಿಕ ರಾಜಧಾನಿಯೆಂದೇ ಕರೆಯಲ್ಪಡುವ ಶಾಂಘೈನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಸೂಕ್ತ ಕಾರಣವಿಲ್ಲದೆ ಜನರು ಮನೆಯಿಂದ ಹೊರಹೋಗುವಂತಿಲ್ಲ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರಬಹುದು.
ಶಾಂಘೈನಲ್ಲಿ ಕರೋನಾ ಪತ್ತೆಗಾಗಿ ಸಾಮೂಹಿಕ ಪರೀಕ್ಷೆಯನ್ನು ಸಹ ಮಾಡಲಾಗಿದೆ. ಇಲ್ಲಿರುವ 2.6 ಕೋಟಿ ಜನರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಶಾಂಘೈ ಆರೋಗ್ಯ ಅಧಿಕಾರಿಗಳು ಜನರ ಮೇಲೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಈ ಪರೀಕ್ಷೆಯಲ್ಲಿ ತಪ್ಪು ಫಲಿತಾಂಶ ಬರುವ ಸಾಧ್ಯತೆ ಬಹಳ ಕಡಿಮೆ. ಕೋವಿಡ್ ನ ಅಲ್ಪ ಲಕ್ಷಣವಿದ್ದರೂ ಇದು ಪತ್ತೆ ಮಾಡುತ್ತದೆ.
ಮನೆಯಿಂದ ಹೊರಬರದಂತೆ ಜನರಿಗೆ ಕಟ್ಟಪ್ಪಣೆ ಮಾಡಲಾಗಿದೆ. ವಿವಿಧ ಪ್ರಾಂತ್ಯಗಳ ಆರೋಗ್ಯ ಕಾರ್ಯಕರ್ತರನ್ನು ಕೂಡ ಸಾಮೂಹಿಕ ಪರೀಕ್ಷೆಗೆ ಕರೆಸಲಾಗಿತ್ತು. ಶಾಂಘೈನಲ್ಲಿ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯನ್ನು ಸಹ ಕರೆಸಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಇಲ್ಲಿದ್ದಾರೆ. ಮಾರ್ಚ್ ತಿಂಗಳ ಅಂತ್ಯದಲ್ಲೇ ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ಹೆಚ್ಚಾಗಿರೋ ಬಗ್ಗೆ ಪುರಾವೆಗಳು ಸಿಗುತ್ತಿವೆ. ಸ್ಥಳೀಯರ ಮಾಹಿತಿ ಪ್ರಕಾರ ಮಾರ್ಚ್ 28 ಮತ್ತು 29 ರಿಂದ್ಲೇ ಸೇನೆಯು ಶಾಂಘೈನತ್ತ ಬರಲಾರಂಭಿಸಿದೆಯಂತೆ.
ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲ
ಶಾಂಘೈನಲ್ಲಿ ಕೊರೊನಾ ಸೋಂಕು ಯಾವ ಮಟ್ಟಕ್ಕಿದೆಯೆಂದರೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಸಿಗ್ತಿಲ್ಲ. ಆಸ್ಪತ್ರೆಗಳಲ್ಲಿನ ದಯನೀಯ ಸ್ಥಿತಿ ಬಗ್ಗೆ ಸ್ಥಳೀಯರು ಮಾತನಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಆಸ್ಪತ್ರೆಗಳ ವಾರ್ಡ್‌ಗಳು ಕೊರೊನಾ ಸೋಂಕಿತರಿಗೆ ತುಂಬಿ ತುಳುಕುತ್ತಿವೆಯಂತೆ. ಐಸೋಲೇಶನ್ ಸೆಂಟರ್‌ನಲ್ಲಿ ಜಾಗವಿಲ್ಲ. ಆಂಬ್ಯುಲೆನ್ಸ್ ಕೊರತೆ ಎದುರಾಗಿದೆ. ಆಂಬ್ಯುಲೆನ್ಸ್ ಗಾಗಿ ಕ್ಷಣಕ್ಕೊಂದು ಕರೆ ಬರ್ತಾ ಇದ್ದು, ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿರೋದ್ರಿಂದ ಕೊರೊನಾ ಪಾಸಿಟಿವ್ ಇದ್ದರೂ, ನೆಗೆಟಿವ್ ರಿಪೋರ್ಟ್ ಕೊಟ್ಟು ಕಳಿಸಲಾಗ್ತಿದೆಯಂತೆ.
ಆಹಾರ ಪದಾರ್ಥಗಳೂ ಖಾಲಿ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಶೂನ್ಯ-ಕೋವಿಡ್ ನೀತಿಯಿಂದಾಗಿ ಜನ ಕಂಗಾಲಾಗಿದ್ದಾರೆ. ಜನರಿಗೆ ಊಟ-ತಿಂಡಿ ಕೂಡ ಸಿಗುತ್ತಿಲ್ಲ. ಆಹಾರ ಪದಾರ್ಥಗಳು ಖಾಲಿಯಾಗ್ತಿವೆ. ಸೂಪರ್ ಮಾರ್ಕೆಟ್ ಮತ್ತು ಅಂಗಡಿಗಳಲ್ಲೂ ದಾಸ್ತಾನು ಕಡಿಮೆಯಾಗುತ್ತಿದೆ. ಆಹಾರ ವಸ್ತುಗಳನ್ನು ಡೆಲಿವರಿ ಮಾಡುವವರನ್ನು ಸಹ ಪ್ರತ್ಯೇಕ ಶಿಬಿರಗಳಲ್ಲಿ ಇರಿಸಲಾಗಿದೆ. ಶಾಂಘೈ ನಗರಕ್ಕೆ ಬೇರೆ ಯಾವುದೇ ಪ್ರಾಂತ್ಯದಿಂದಲೂ ಯಾವ ವಸ್ತುವನ್ನೂ ತರುವಂತಿಲ್ಲ. ಆಹಾರ ವಸ್ತುಗಳನ್ನು ಹೊತ್ತು ಲಾರಿಗಳು ಬಂದರೂ ಅಲ್ಲಿಂದ ಹೊರಹೋಗಲು ಅವಕಾಶವಿಲ್ಲ. ಹಾಗಾಗಿ ಲಾಜಿಸ್ಟಿಕ್ಸ್ ನೀಡಲು ಕಂಪನಿಗಳು ಹಿಂದೇಟು ಹಾಕುತ್ತಿವೆ.
ಮಾಯವಾಗ್ತಿದ್ದಾರೆ ಕೊರೊನಾ ಸೋಂಕಿತರು
ಶಾಂಘೈನಲ್ಲಿ, ಸೋಂಕಿತರನ್ನು ‘ಕಣ್ಮರೆ’ ಮಾಡಲಾಗುತ್ತಿದೆ. ಇಲ್ಲಿ ಜನರನ್ನು ಪ್ರತ್ಯೇಕಿಸಲು ಜಾಗವಿಲ್ಲ. ಅದಕ್ಕಾಗಿಯೇ ಅವರನ್ನು ಬೇರೆಡೆಗೆ ಕಳುಹಿಸಲಾಗುತ್ತಿದೆ. ಸೋಂಕಿತರನ್ನು ಶಾಂಘೈ ಪಕ್ಕದಲ್ಲಿರುವ ಜೆಜಿಯಾಂಗ್ ಮತ್ತು ಜಿಯಾಂಗ್ಸುಗೆ ಬಲವಂತವಾಗಿ ಕಳುಹಿಸಲಾಗುತ್ತಿದೆ. ಪ್ರತಿ ಪ್ರಾಂತ್ಯಕ್ಕೂ ಸಾವಿರದಿಂದ ಎರಡು ಸಾವಿರ ಜನರನ್ನು ಕಳುಹಿಸಲಾಗುತ್ತಿದೆ. ಇಷ್ಟೇ ಅಲ್ಲ, ಶಾಂಘೈನ ಪ್ರಖ್ಯಾತ ವೈದ್ಯ, ಡಿಸೀಸ್ ಎಕ್ಸ್ ಪರ್ಟ್ ಝೆಂಗ್ ವೆನ್ಹಾಂಗ್ ಕೂಡ ಮಾರ್ಚ್ 23ರಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರನ್ನು ಹುದ್ದೆಯಿಂದ ಕೆಳಗಿಳಿಸಿರಬಹುದು ಎನ್ನಲಾಗ್ತಾ ಇದೆ. ಯಾಕಂದ್ರೆ ಝೆಂಗ್, ಸೋಶಿಯಲ್ ಮೀಡಿಯಾದಲ್ಲಿ ಶೂನ್ಯ-ಕೋವಿಡ್ ನೀತಿಯ ಬಗ್ಗೆ ಆಕ್ಷೇಪಿಸಿದ್ದರು.