ಚೀನಾದ ಶಾಂಘೈ ನಗರದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವು ಸಂಭವಿಸಿದೆ. ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಮತ್ತೆ ಲಾಕ್‌ಡೌನ್ ಹೇರಿದಾಗಿನಿಂದ ಮೊದಲ ಸಾವು ಅಂತಾ ಹೇಳಲಾಗ್ತಿದೆ. ನಿನ್ನೆ ಮೂವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಮೃತಪಟ್ಟ ಮೂವರೂ 89 ರಿಂದ 91 ವರ್ಷ ವಯಸ್ಸಿನವರು, ಅನೇಕ ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ರು ಅಂತ ಶಾಂಘೈ ಅಧಿಕಾರಿಗಳು ಹೇಳಿದ್ದಾರೆ. ಜಿಲಿನ್ ನಗರದಲ್ಲಿ ಮಾರ್ಚ್‌ನಲ್ಲಿ ಇಬ್ಬರು ಕೋವಿಡ್‌ಗೆ ಬಲಿಯಾಗಿದ್ದರು.
ಅದಾದ ಬಳಿಕ ಸಾವಿನ ಪ್ರಕರಣವನ್ನು ಚೀನಾ ವರದಿ ಮಾಡಿರೋದು ಇದೇ ಮೊದಲು. ಶಾಂಘೈನಲ್ಲಿ ಲಾಕ್‌ಡೌನ್ ಅನ್ನು ತೆರವು ಮಾಡುವ ಸಾಧ್ಯತೆ ಇದೆ. ಇದಕ್ಕಾಗಿಯೇ ಪ್ರತ್ಯೇಕ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ವ್ಯಾಪಕವಾದ ಕೊರೊನಾ ಪರೀಕ್ಷೆಯನ್ನು ಕೂಡ ಚೀನಾ ಮಾಡ್ತಾ ಇದೆ.
ಕೋವಿಡ್ ಪಾಸಿಟಿವ್ ಇದ್ದವರನ್ನೆಲ್ಲ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಕಳೆದ ತಿಂಗಳು ಶೆಂಝೆನ್ ನಗರದಲ್ಲಿ ಎಲ್ಲಾ ಕೋವಿಡ್ ನಿಯಮಗಳನ್ನು ಸಡಿಲ ಮಾಡಲಾಗಿತ್ತು. 2019ರಲ್ಲಿ ಚೀನಾದ ವುಹಾನ್ ನಗರದಲ್ಲಿ ಕೊರೊನಾ ಸೋಂಕು ಮೊದಲ ಬಾರಿ ಕಾಣಿಸಿಕೊಂಡಿತ್ತು. ಅದಾದ್ಮೇಲೆ ಈವರೆಗೆ ಚೀನಾದಲ್ಲಿ 3,20,000 ಜನರಿಗೆ ಸೋಂಕು ತಗುಲಿದೆ.
ಶಾಂಘೈನಲ್ಲಿ ಲಾಕ್‌ಡೌನ್ ಹಾಗೂ ಕಠಿಣ ನಿಯಮಗಳಿಂದಾಗಿ ಜನರು ಪರದಾಡುವಂತಾಗಿತ್ತು. ಆಹಾರ, ಅಗತ್ಯ ವಸ್ತುಗಳೂ ಸಿಗದೆ ನಾಗರಿಕರು ಜಾಲತಾಣಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಕಾರ್ಖಾನೆಗಳು ಸೇರಿದಂತೆ ಇತರ ಕೈಗಾರಿಕೆಗಳನ್ನೂ ನಿರ್ಬಂಧಿಸಿದ್ದರಿಂದ ಚೀನಾದ ವಹಿವಾಟಿಗೂ ಹೊಡೆತ ಬಿದ್ದಿತ್ತು.