ಚೀನಾದಲ್ಲಿ ಕೊರೊನಾ ನಾಲ್ಕನೇ ಅಲೆ ಸಾಕಷ್ಟು ಆತಂಕದ ಸ್ಥಿತಿಯನ್ನೇ ನಿರ್ಮಾಣ ಮಾಡಿದೆ. ಶಾಂಘೈನಲ್ಲಂತೂ ಕೋವಿಡ್ ಅಬ್ಬರ ಹೆಚ್ಚಾಗಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಎಷ್ಟೇ ಕಟ್ಟುನಿಟ್ಟು ಮಾಡಿದ್ರೂ, ಲಾಕ್‌ಡೌನ್ ಇದ್ದರೂ ಸೋಂಕು ಮಾತ್ರ ನಿಯಂತ್ರಣಕ್ಕೆ ಬರ್ತಿಲ್ಲ. ನಿನ್ನೆ ಒಂದೇ ದಿನದಲ್ಲಿ ಶಾಂಘೈನಲ್ಲಿ 20,700ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ವಿಪರ್ಯಾಸ ಅಂದ್ರೆ ಇವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳೇ ಇರಲಿಲ್ಲ, ಆದ್ರೆ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಇನ್ನು 3400 ಜನರಲ್ಲಿ ಕೊರೊನಾ ಲಕ್ಷಣಗಳು ಪತ್ತೆಯಾಗಿವೆ. ಕಳೆದ 15 ದಿನಗಳಿಂದ್ಲೂ ಚೀನಾ ಸರ್ಕಾರ ಶಾಂಘೈನಲ್ಲಿ ಲಾಕ್‌ಡೌನ್ ಮಾಡಿದೆ.
ಆದರೂ ದಿನೇ ದಿನೇ ಇಲ್ಲಿ ಸೋಂಕು ಹೆಚ್ಚಾಗುತ್ತಲೇ ಇದೆ. ಜನರನ್ನು ಹಲವು ಸುತ್ತಿನ ಪರೀಕ್ಷೆಗೆ ಒಳಪಡಿಸಲಾಗ್ತಾ ಇದೆ. ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಹಾಸಿಗೆಗಳು ಮತ್ತು ಹೆಚ್ಚುವರಿ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ.
ಲಾಕ್‌ಡೌನ್‌ನಿಂದಾಗಿ ಶಾಂಘೈನಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಮನೆಗಳಲ್ಲೇ ಲಾಕ್ ಆಗಿರೋ ಜನರು ನಾನಾ ಸಮಸ್ಯೆಗಳನ್ನು ಎದುರಿಸ್ತಿದ್ದಾರೆ. ಅನೇಕ ಮನೆಗಳಲ್ಲಿ ಊಟವಿಲ್ಲ. ಹೊರಗೆ ಹೋಗಿ ಆಹಾರ ಪದಾರ್ಥಗಳನ್ನು ಕೂಡ ತರುವಂತಿಲ್ಲ, ಅದಕ್ಕೂ ಸರ್ಕಾರ ನಿರ್ಬಂಧ ಹೇರಿದೆ.
ಇದರಿಂದ ಕಂಗೆಟ್ಟಿರೋ ಶಾಂಘೈ ನಿವಾಸಿಗಳು ಇಂಟರ್ನೆಟ್ ಮೂಲಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಂಘೈನಲ್ಲಿ ಚಿಕಿತ್ಸೆಗಾಗಿ ಕಾಯುತ್ತಿದ್ದ ವೃದ್ಧೆಯೊಬ್ಬರು ಸಾವನ್ನಪ್ಪಿದ ಪ್ರಕರಣದ ಬಳಿಕ ನಾಗರಿಕರ ಆಕ್ರೋಶ ಮತ್ತಷ್ಟು ಹೆಚ್ಚಿದೆ.
ಮೂಲಗಳ ಪ್ರಕಾರ ಚೀನಾ ಕೊರೊನಾ ಸಾವಿನ ಪ್ರಕರಣಗಳ ಅಧಿಕೃತ ಅಂಕಿ-ಅಂಶಗಳನ್ನು ಮರೆಮಾಚುತ್ತಿದೆ. ನಿನ್ನೆ ಶಾಂಘೈ ಆಸ್ಪತ್ರೆಯಲ್ಲಿ ಕೋವಿಡ್‌ನಿಂದಲೇ 12 ವೃದ್ಧರು ಮೃತಪಟ್ಟಿದ್ದರು. ಆದ್ರೆ ಅವರು ಕೊರೊನಾದಿಂದ ಸತ್ತಿಲ್ಲ ಅನ್ನೋದು ಚೀನಾದ ವಾದ. ಚೀನಾ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2020 ರಿಂದೀಚೆಗೆ ಶಾಂಘೈ ನಗರದಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲವಂತೆ. ಚೀನಾದ ಈ ವರದಿ ಸುಳ್ಳು ಅನ್ನೋದು ಬಹುತೇಕ ಪಕ್ಕಾ ಆಗಿದೆ.