ಮೈಸೂರು: ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ ಜಾನುವಾರುಗಳು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಚಿರತೆ ಸೆರೆ ಹಿಡಿಯಲೆಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿವೆ. ಈ ನಡುವೆ ಚಿರತೆ ಸೆರೆಗೆಂದು ಇಟ್ಟಿದ್ದ ಬೋನಿನಲ್ಲಿ ಈಗ ಚಿರತೆಯ ಮರಿಯೊಂದು ಬಿದ್ದಿದೆ.
ಕಳೆದ ಮೂರು ತಿಂಗಳಿಂದ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಇಡುತ್ತಿವೆ. ಚಿರತೆ ಹಿಡಿಯಲೆಂದು ಅರಣ್ಯ ಇಲಾಖೆ ಸಿಬ್ಬಂದಿ ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೋನುಗಳನ್ನು ಇಟ್ಟಿದ್ದು, ಬದನಕುಪ್ಪೆ ಗ್ರಾಮದಲ್ಲಿ ಈಗ ಮರಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ವಾಗ್ವಾದಕ್ಕಿಳಿದಿದ್ದು, ಚಿರತೆಯಿಂದ ನೂರಾರು ಸಾಕು ಪ್ರಾಣಿಗಳ ಜೀವಹಾನಿಯಾಗಿದೆ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಪರಿಹಾರ ನೀಡುವವರೆಗೂ ಬೋನಿಗೆ ಬಿದ್ದ ಚಿರತೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಹಾರದ ಭರವಸೆ ನೀಡಿ, ಚಿರತೆ ಮರಿಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಿದ್ದಾರೆ.