ಮೈಸೂರು: ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ನೀಡುವಂತೆ ಅರಣ್ಯ ಸಚಿವರು ಸೂಚಿಸಿದ್ದಾರೆ.
ಚಿರತೆ ದಾಳಿಯಿಂದ ಗಾಯಗೊಂಡಿದ್ದ 6 ವರ್ಷದ ಬಾಲಕಿ ಸುಶೀಲಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಚಾಮರಾಜನಗರ ಹನೂರು ತಾಲೂಕಿನ ಕಗ್ಗಲಿಗುಂದಿಯಲ್ಲಿ ಮನೆಯಿಂದ ಬಾಲಕಿ ಹೊರಬರುತ್ತಿದ್ದಂತೆ ದಾಳಿ ನಡೆಸಿದ್ದ ಚಿರತೆ ಬಾಲಕಿಯನ್ನು ಎಳೆದೊಯ್ಯಲು ಯತ್ನಿಸಿತ್ತು. ಈ ವೇಳೆ ಮನೆಯಿಂದ ಹೊರ ಬಂದ ಜನ ಕೂಗಿಕೊಳ್ಳುತ್ತಿದ್ದಂತೆ ಚಿರತೆ ಪರಾರಿಯಾಗಿದೆ.
ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಳು. ಮೃತ ಬಾಲಕಿ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಚಿರತೆ ದಾಳಿಯಿಂದ ಬಾಲಕಿ ಸಾವು ವಿಚಾರ ಕೇಳಿ ದುಃಖವಾಯಿತು. ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಬಾಲಕಿ ಕುಟುಂಬಕ್ಕೆ 4 ಸಾವಿರ ಮಾಸಾಶನ ಬರುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟು ಜಾರಿಗೊಳಿಸಲು ಯತ್ನಿಸುವುದಾಗಿ ತಿಳಿಸಿದ್ದಾರೆ.