ಬೆಂಗಳೂರು: ತಮ್ಮ ವಿರುದ್ಧ ಇಡಿ ಅಧಿಕಾರಿಗಳಿಂದ ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಕಾನೂನು, ಸತ್ಯ, ಧರ್ಮದಲ್ಲಿ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಇಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ಮಾಧ್ಯಮಗಳಿಂದಲೇ ಗೊತ್ತಾಯಿತು. ಚಾರ್ಜ್ ಶೀಟ್ ಅಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಚಾರ್ಜ್ ಶೀಟ್ ಕಾಪಿ ಬರಲಿ ಮಾತನಾಡುತ್ತೇನೆ. ಎಲ್ಲವನ್ನೂ ಎದುರಿಸಲು ಸಿದ್ಧನಾಗಿದ್ದೇನೆ ಹೆದರುವ ಪ್ರಶ್ನೆ ಇಲ್ಲ ಎಂದರು.
ಈ ದೇಶದ ಕಾನೂನು, ಸತ್ಯ, ಧರ್ಮದಲ್ಲಿ ನಂಬಿಕೆ ಇದೆ. ಹೊಸದಾಗಿ ಸೃಷ್ಟಿ ಮಾಡಿ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಿಲ್ಲ. ಚಾರ್ಜ್ ಶೀಟ್ ನಲ್ಲಿ ಏನಿದೆ ಎಂಬುದು ಗೊತ್ತಾದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಇದು ರಾಜಕೀಯ ಪ್ರೇರಿತವಾದ ಷಡ್ಯಂತ್ರ. ಕಾಂಗ್ರೆಸ್ ಪಕ್ಷದ ಪರವಾಗಿ ಒಬ್ಬ ಸೈನಿಕನಂತೆ ಹೋರಾಡುತ್ತಿದ್ದಾರೆ ಡಿ.ಕೆ. ಶಿವಕುಮಾರ್. ಅವರು ಚಾರ್ಜ್ ಶೀಟ್ ಆದರೂ ಹಾಕಲಿ ಏನನ್ನಾದರೂ ಮಾಡಲಿ ಕಾಂಗ್ರೆಸ್ ನ ಓರ್ವ ನಿಷ್ಠಾವಂತ ಕಾರ್ಯಕರ್ತನಾಗಿ ಎಲ್ಲವನ್ನೂ ಎದುರಿಸುತ್ತೇವೆ ಎಂದರು.
ಸರ್ಕಾರದ ವಿರುದ್ಧ ದ್ವನಿ ಎತ್ತುವವರ ಧ್ವನಿ ಅಡಗಿಸುವ ಕೆಲಸವನ್ನು ಬಿಜೆಪಿ ಕಳೆದ 8 ವರ್ಷಗಳಿಂದ ಮಾಡುತ್ತಿದೆ. ಅದನ್ನು ಈ ದೇಶದ ಜನರು ನೋಡುತ್ತಿದ್ದಾರೆ. ಯಾರು ಅವರ ವಿರುದ್ಧ ಬಲಿಷ್ಠವಾಗಿದ್ದಾರೆ, ಅವರ ವಿರುದ್ಧ ಹೋಗುತ್ತಾರೆ ಅಂತವರನ್ನು ಹತ್ತಿಕ್ಕುವ ಕೆಲಸ ಬಿಜೆಪಿ ನಾಯಕರದ್ದಾಗಿದೆ. ಇದು ಕೂಡ ಅದರ ಒಂದು ಭಾಗ ಎಂದು ಕಿಡಿಕಾರಿದರು.