ಬೆಂಗಳೂರು: ಚಾಮರಾಜಪೇಟೆ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂರು ಇದು ಈದ್ಗಾ ಮೈದಾನ ಎಂದರೆ ಹಿಂದೂಗಳು ಇದನ್ನು ಆಟದ ಮೈದಾನವನ್ನಾಗಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈದ್ಗಾ ಮೈದಾನವನ್ನು ಆಟದ ಮೈದಾನವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸರ್ಕಾರದ ಗಮನ ಸೆಳೆಯಲು ಇಂದು ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದೆ.
ಚಾಮರಾಜಪೇಟೆ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಗೃಹ ಇಲಾಖೆಯಿಂದ ಎಲ್ಲಾ ರೀತಿ ಬಂದೋಬಸ್ತ್ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದ್ರೆ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಅಂತಹ ಘಟನೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಬಂದ್ ಗೆ ಸರ್ಕಾರ ಬೆಂಬಲ ಕೊಟ್ಟಿಲ್ಲ. ಚಾಮರಾಜಪೇಟೆ ಬಂದ್ ಗೆ ಸರ್ಕಾರ ಯಾಕೆ ಬೆಂಬಲ ಕೊಡಬೇಕು ? ಜಾಗದ ಬಗ್ಗೆ ಬಿಬಿಎಂಪಿ ನಿರ್ಣಯ ಮಾಡುತ್ತೆ. ಬಂದ್ ವೇಳೆ ಯಾವುದೇ ರೀತಿ ಅಹಿತಕರ ಘಟನೆಯಾಗದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.