ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಮೈಸೂರು ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರೇ ಕಾರಣ ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಗಂಭೀರ ಆರೋಪ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೂರೈಕೆ ವಿಚಾರವಾಗಿ ರೋಹಿಣಿ ಸಿಂಧೂರಿ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಮೂರು ಆಡಿಯೋ ಬಿಡುಗಡೆ ಮಾಡಿರುವ ಅಮ್ಮನಪುರ ಮಲ್ಲೇಶ್, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಜನರು ಸಾವನ್ನಪ್ಪಲು ರೋಹಿಣಿ ಸಿಂಧೂರಿಯವರ ಆದೇಶವೇ ಕಾರಣ. ಆಕ್ಸಿಜನ್ ಪೂರೈಕೆಗೆ ಡಿಸಿ ತಡೆಹಿಡಿದಿದ್ದರು ಎಂದು ಹೇಳಿದ್ದಾರೆ.
ಚಾಮರಾಜನಗರಕ್ಕೆ ಪರ್ಮಿಷನ್ ಇಲ್ಲದೇ ಆಕ್ಸಿಜನ್ ಪೂರೈಕೆ ಮಾಡುವಂತಿಲ್ಲ. ಒಂದು ವೇಳೆ ಅನುಮತಿಯಿಲ್ಲದೇ ಆಕ್ಸಿಜನ್ ಪೂರೈಕೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಸಿಂಧೂರಿ ಆದೇಶ ಹೊರಡಿಸಿದ್ದರು. ಅರುಣ್ ಎಂಬುವವರು ಡಿಸಿ ಬಳಿ ಕಣ್ಣೀರಿಟ್ಟರೂ ಆಕ್ಸಿಜನ್ ಪೂರೈಕೆಗೆ ಅವಕಾಶ ನೀಡಿಲ್ಲ. ಆಕ್ಸಿಜನ್ ಏಜನ್ಸಿಗಳಿಗೂ ಆಕ್ಸಿಜನ್ ಪೂರೈಕೆ ಮಾಡದಂತೆ ಆದೇಶ ಹೊರಡಿಸಿದ್ದರು ಎನ್ನಲಾಗಿದೆ. ರೋಹಿಣಿ ಸಿಂಧೂರಿಯವರ ದುರಹಂಕಾರದಿಂದಲೇ 36 ಜನ ಕೊರೊನಾ ಸೋಂಕಿತರು ಪ್ರಾಣವಾಯುವಿಗಾಗಿ ಪರದಾಡಿ ಪ್ರಾಣಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.