ಚಾಮರಾಜನಗರ: ಚಾಮರಾಜನಗರಕ್ಕೆ ಬಂದಿರುವುದರಿಂದ ಶುಭ ಸೂಚನೆಯಾಗಿದೆ. ಯಾವುದೇ ಮೂಢನಂಬಿಕೆಗಳನ್ನು ನಾನು ನಂಬುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂದು ಯಾರೋ ಮೂಢನಂಬಿಕೆ ಬಿತ್ತಿದ್ದಾರೆ. ಇದು ಸುಳ್ಳು. ಎಲ್ಲಾ ಜನಪ್ರತಿನಿಧಿಗಳು ಕೂಡ ಚಾಮರಾಜನಗರಕ್ಕೆ ಭೇಟಿ ಕೊಡಬೇಕು. ಈ ಮೂಲಕ ಒಳ್ಳೆಯ ರೀತಿಯ ಬದಲಾವಣೆಯನ್ನು ಸಮಾಜದಲ್ಲಿ ತರಬೇಕು. ಇಲ್ಲಿನ ಮುಗ್ದ ಜನರ ಮುಖವನ್ನು ನೋಡಿದರೆ ಶಾಪವೂ ಕೂಡ ನಿವಾರಣೆಯಾಗುತ್ತದೆ ಎಂದು ಹೇಳುವ ಮೂಲಕ ಚಾಮರಾಜನಗರಕ್ಕೆ ಭೇಟಿ ನೀಡದ ಹಿಂದಿನ ಮುಖ್ಯಮಂತ್ರಿಗಳಿಗೆ ಟಾಂಗ್ ನೀಡಿದರು.
ನಾನು ಚಾಮರಾಜನಗರಕ್ಕೆ ಮೂರು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿ ಬಂದ ಮೇಲೆ ರಾಜಕೀಯ ಶಕ್ತಿ ವೃದ್ಧಿಯಾಗಿದೆ. ನನ್ನ ಶಕ್ತಿ ಇಮ್ಮಡಿಯಾಗಿದೆ. ಚಾಮರಾಜನಗರಕ್ಕೆ ಎಷ್ಟು ಬಾರಿ ಕರೆದರೂ ಬರುತ್ತೇನೆ. ಜಿಲ್ಲೆ ಅಭಿವೃದ್ಧಿಗಾಗಿ ಏನೇ ಕೇಳಿದರೂ ಸರ್ಕಾರ ಸ್ಪಂದಿಸಲಿದೆ. ನಾನು ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದೇನೆ. ಜನ ಶಕ್ತಿ ಗೆಲ್ಲಬೇಕು. ಯಾವ ಟೀಕೆ ಬಂದರೂ ಅಂಜಲ್ಲ, ಅಳುಕಲ್ಲ, ಜಗ್ಗುವುದೂ ಇಲ್ಲ. ಸತ್ಯಮೇವ ಜಯತೆ ಎಂಬುದರಲ್ಲಿ ಬಲವಾದ ನಂಬಿಕೆಯಿದೆ ಎಂದು ಹೇಳಿದರು.