ಬೆಂಗಳೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದರೂ ಅಕೌಂಟೆಬಿಲಿಟಿ ಇಟ್ಟುಕೊಂಡಿರಬೇಕು. ಬಡವರಿಗೆ ಗ್ಯಾರಂಟಿ ಯೋಜನೆ ಕೊಡುತ್ತೇವೆ ಎಂದು ಹೇಳಿದ್ದೆವು. ಹಾಗಾಗಿ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಡವರಿಗೆ ಗ್ಯಾರಂಟಿ ಯೋಜನೆಗಳಿಂದ ಅನುಕುಲವಾಗಲಿದೆ. ಟ್ಯಾಕ್ಸ್ ಕಟ್ಟುವವರಾರೂ 2000 ರೂಪಾಯಿ ಕೊಡಿ ಎಂದು ಕೇಳುವುದಿಲ್ಲ. 2000 ರೂಪಾಯಿ ಹಣ ಬೇಡ ಎಂದು ಹಲವರು ಪತ್ರ ಬರೆದಿದ್ದಾರೆ. ಒಬ್ಬರಿಗೆ ಒಂದು ರೂಪಾಯಿ ಕೊಡಾಬೇಕು ಎಂದರೂ ಆಧಾರ್ ಕಾರ್ಡ್ ಹೊಂದಿರಬೇಕು. ಅವರದ್ದೇ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಆಧಾರ್ ಸಂಖ್ಯೆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಪಾಪ ಬಿಜೆಪಿಯವರಿಗೆ ಅಸೂಯೆ ಆರಂಭವಾಗಿದೆ. ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಸೂಯೆಗೆ ಯಾವುದೇ ಔಷಧವಿಲ್ಲ ಎಂದರು.
ಎಲ್ಲರಿಗೂ 15 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಯಾಕೆ ಕೊಟ್ಟಿಲ್ಲ? ಮೊದಲು ಬಿಜೆಪಿಯವರು ಎಲ್ಲರ ಅಕೌಂಟ್ ಗೆ 15 ಲಕ್ಷ ರೂಪಾಯಿ ಹಾಕಲಿ. ಲೋಕಸಭಾ ಚುನಾವಣೆ ಎದುರಿಸಲು ಹೋಗುತ್ತಿರುವ ಬಿಜೆಪಿ ನಾಯಕರು ಮೊದಲು 15 ಲಕ್ಷ ಹಾಕಲಿ. ಆದಾಯ ಡಬಲ್ ಮಾಡ್ತೀವಿ ಎಂದು ಭರವಸೆ ಕೊಟ್ಟಿದ್ದರು. ಎಲ್ಲಿ ಡಬಲ್ ಆಗಿದೆ? ಎಂದು ಪ್ರಶ್ನಿಸಿದರು.