ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟಾರ್ಗೆಟ್ ಮಾಡಿ ಟಿಕಿಸುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ನಾವು ನಮ್ಮ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆ. ಮೊದಲು ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಹುಡುಕಿ ಎಂದು ಟಾಂಗ್ ನೀಡಿದೆ.
ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೆ ತರುವುದು ಗ್ಯಾರಂಟಿ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಬಿಜೆಪಿ ನಾಯಕರು ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಲಿ. ಹಾಗೇ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿಕೊಳ್ಳಲಿ ಎಂದು ಹೇಳಿದೆ.
ಇದೇ ವೇಳೆ ಬಿಜೆಪಿ ಸೋಲಿನ ಹೊಣೆ ಹೊರುವವರು ಯಾರು ಎಂದು ಕೇಳಿದೆ. ಚುನಾವಣೆಯಲ್ಲಿ ಹೀನಾಯವಾಗಿ ಸೋತ ಸೋಲಿನ ಹೊಣೆ ಹೊರುವವರು, ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರೂ ಇಲ್ಲವೇ ಬಿಜೆಪಿಯಲ್ಲಿ? ಸೋಲಿನ ಹೊಣೆ ಯಾರದ್ದು? ಅಮಿತ್ ಶಾ ಅವರದ್ದೋ? ಬೊಮ್ಮಾಯಿ ಅವರದ್ದೋ? ಮೋದಿಯವರದ್ದೋ? ನಳೀನ್ ಕಟೀಲ್ ಅವರದ್ದೋ? ಎಂದು ಪ್ರಶ್ನಿಸಿದೆ.