
ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಮಾಡಲು ಈಗ ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ನಮ್ಮ ದೇಶದ ಪ್ರಮುಖ ಬೆನ್ನೆಲುಬು ಸಣ್ಣ ಕೈಗಾರಿಕೆಗಳು. ರಾಜ್ಯ ಸರ್ಕಾರದ ಬಳಿ ಸಂಕಷ್ಟ ಹೇಳಿಕೊಳ್ಳಲು ಕೈಗಾರಿಕಾ ನಿಯೋಗ ಹೋಗಿತ್ತು. ಆದರೆ ಕೈಗಾರಿಕೋದ್ಯಮಿಗಳ ಸಂಕಷ್ಟ ಕೇಳದೇ ಸರ್ಕಾರ ಪಾಠ ಮಾಡಿ ಕಳುಹಿಸಿದೆ. ಕೋವಿಡ್ ನಿಂದ ಇನ್ನೂ ಸಣ್ಣ ಕೈಗಾರಿಕೆ ಚೇತರಿಸಿಕೊಂಡಿಲ್ಲ. ಈಗ ವಿದ್ಯುತ್ ಹೊರೆ ಹಾಕಿದರೆ ಎಂಎಸ್ಎಂಇ ಚೇತರಿಸಿಕೊಳ್ಳಲು ಹೇಗೆ ಸಾಧ್ಯ? ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ವಿದ್ಯುತ್ ದರ ಏರಿಕೆಯನ್ನು ಕೆ ಇ ಆರ್ ಸಿ ಸ್ವತಂತ್ರವಾಗಿ ನಿರ್ಧರಿಸಲು ಆಗಲ್ಲ. ಕಾಂಗ್ರೆಸ್, ಬಿಜೆಪಿ ನಾಯಕರು ಪರಸ್ಪರ ಆರೋಪ ಮಾಡಿಕೊಳ್ತಿದ್ದಾರೆ. ಈಗ ಹಾಲಿನ ದರ ಸಹ 5 ರೂಪಾಯಿ ಜಾಸ್ತಿ ಮಾಡ್ತಿದ್ದಾರೆ. ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿಯೂ ಕಡಿತ ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.