ಭಯೋತ್ಪಾದನೆ ಸಂಬಂಧ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಸೇರಿದಂತೆ ಇತರ 12 ಮಂದಿ ವಿರುದ್ಧ ಹೊಸ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ಮೈಂಡ್ಗಳಾದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ನೊಂದಿಗೆ 12 ಜನರ ವಿರುದ್ಧ ಎನ್ಐಎ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿದೆ.
ಭಯೋತ್ಪಾದನೆ ಮತ್ತು ಉನ್ನತ ವ್ಯಕ್ತಿಗಳ ಉದ್ದೇಶಿತ ಹತ್ಯೆಗಳನ್ನು ನಡೆಸುವುದು ಇವರ ಉದ್ದೇಶವೆಂದು ಹೇಳಿದೆ. ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ (BKI) ಮತ್ತು ಹಲವಾರು ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರೋದಾಗಿ ದರೋಡೆಕೋರರ ವಿರುದ್ಧ ಎನ್ಐಎ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಎನ್ಐಎ ತನಿಖೆ ನಡೆಸುತ್ತಿರುವ ಮೂರು ಭಯೋತ್ಪಾದಕ-ದರೋಡೆಕೋರರ ಸಂಬಂಧದ ಪ್ರಕರಣಗಳಲ್ಲಿ ಇದು ಎರಡನೆಯ ಚಾರ್ಜ್ ಶೀಟ್ ಆಗಿದೆ.
ಎಲ್ಲಾ 14 ಆರೋಪಿಗಳ ಮೇಲೆ ಭಯೋತ್ಪಾದನೆ ಆರೋಪ ಮತ್ತು ಪ್ರಸಿದ್ಧ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು, ಚಲನಚಿತ್ರ ತಾರೆಯರು, ಗಾಯಕರು ಮತ್ತು ಉದ್ಯಮಿಗಳ ಉದ್ದೇಶಿತ ಹತ್ಯೆಗಳನ್ನು ನಡೆಸಲು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ.
ಆರೋಪಿಗಳು ಪಾಕಿಸ್ತಾನದ ಪಿತೂರಿಗಾರರೊಂದಿಗೆ ಸಂಪರ್ಕ ಹೊಂದಿದ್ದಲ್ಲದೆ, ಕೆನಡಾ, ನೇಪಾಳ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ಖಲಿಸ್ತಾನ್ ಪರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಎನ್ಐಎ ಹೇಳಿದೆ.
ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ (ಅಲಿಯಾಸ್ ಸತ್ವಿಂದರ್ಜಿತ್ ಸಿಂಗ್) ಹೊರತಾಗಿ ಚಾರ್ಜ್ ಶೀಟ್ ನಲ್ಲಿರುವ ಇತರ ಆರೋಪಿಗಳೆಂದರೆ ಜಗದೀಪ್ ಸಿಂಗ್ ಅಲಿಯಾಸ್ ಜಗ್ಗು ಭಗವಾನ್ ಪುರಿಯಾ, ಸಚಿನ್ ಥಾಪನ್ ಅಲಿಯಾಸ್ ಸಚಿನ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್ ಅಲಿಯಾಸ್ ಭಾನು, ವಿಕ್ರಮಜೀತ್ ಸಿಂಗ್ ಅಲಿಯಾಸ್ ವಿಕ್ರಮ್ ಬ್ರಾರ್ಯಾ, ಸಂದೀಪ್ ಝಾಂದರ್ ಕಲಜಾರ್. ಪ್ರತಾಪ್ ಸಿಂಗ್ ಅಲಿಯಾಸ್ ಕಲಾ ರಾಣಾ, ಜೋಗಿಂದರ್ ಸಿಂಗ್, ರಾಜೇಶ್ ಕುಮಾರ್ ಅಲಿಯಾಸ್ ರಾಜು ಮೋಟಾ, ರಾಜ್ ಕುಮಾರ್ ಅಲಿಯಾಸ್ ರಾಜು/ರಾಜು ಬಸೋಡಿ, ಅನಿಲ್ ಅಲಿಯಾಸ್ ಚಿಪ್ಪಿ, ನರೇಶ್ ಯಾದವ್ ಅಲಿಯಾಸ್ ಸೇಠ್, ಮತ್ತು ಶಹಬಾಜ್ ಅನ್ಸಾರಿ ಅಲಿಯಾಸ್ ಶಹಬಾಜ್.
2015 ರಲ್ಲಿ ಬಂಧನದ ನಂತರ ಜೈಲಿನಲ್ಲಿಯೇ ಇರುವ ಲಾರೆನ್ಸ್ ಬಿಷ್ಣೋಯ್ ವಿವಿಧ ರಾಜ್ಯಗಳ ಜೈಲುಗಳಲ್ಲಿ ತನ್ನ ಭಯೋತ್ಪಾದಕ ಕೃತ್ಯಗಳನ್ನು ನಿರ್ವಹಿಸುತ್ತಿದ್ದಾನೆ. ನವೆಂಬರ್, 2022 ರಲ್ಲಿ ಪಂಜಾಬ್ ನ ಫರಿದ್ಕೋಟ್ ‘ಡೇರಾ ಸಚ್ಚಾ ಸೌದಾ’ ಅನುಯಾಯಿ ಪ್ರದೀಪ್ ಕುಮಾರ್ ಹತ್ಯೆಯ ಆರೋಪಿ ಕೆನಡಾ ಮೂಲದ ಗೋಲ್ಡಿ ಬ್ರಾರ್ ಕೂಡ ಜೈಲಿನಲ್ಲಿದ್ದಾನೆ.
ಪಾಕಿಸ್ತಾನ ಮೂಲದ ಬಿಕೆಐ ಭಯೋತ್ಪಾದಕ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ನಿರ್ದೇಶನದ ಮೇರೆಗೆ ಮೊಹಾಲಿಯಲ್ಲಿರುವ ಪಂಜಾಬ್ ರಾಜ್ಯದ ಗುಪ್ತಚರ ಪ್ರಧಾನ ಕಚೇರಿಯ ಮೇಲಿನ ಆರ್ಪಿಜಿ ದಾಳಿ ಪ್ರಕರಣಕ್ಕೆ ದಾಳಿಕೋರರನ್ನು ಒದಗಿಸುವ ಜವಾಬ್ದಾರಿಯನ್ನು ಲಾರೆನ್ಸ್ ಬಿಷ್ಣೋಯ್ ವಹಿಸಿದ್ದ ಎಂದು ಎನ್ಐಎ ಹೇಳಿದೆ.
ಗೋಲ್ಡಿ ಬ್ರಾರ್, ರಿಂಡಾ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ BKI ಕಾರ್ಯಕರ್ತ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.