ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಹೀಗಾಗಿ ಜಾನುವಾರು ಸಾಗಿಸುವ ವೇಳೆ ಅನುಮತಿ ಪತ್ರವನ್ನು ತೋರಿಸಬೇಕಾಗಿತ್ತು. ಆದರೆ ಕೈಯಲ್ಲಿ ಭರ್ತಿ ಮಾಡಿದ ಅರ್ಜಿಗೆ ಅನುಮತಿ ಪಡೆದ ಬಳಿಕ ಕೆಲವೊಮ್ಮೆ ಅದರ ದುರ್ಬಳಕೆ ಆಗುತ್ತಿದ್ದ ಕಾರಣ ಇದೀಗ ಪಶು ಸಂಗೋಪನ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಜಾನುವಾರು ಸಾಗಾಣೆಯ ಪರವಾನಿಗೆ ಪಡೆಯುವ ವ್ಯವಸ್ಥೆಗೆ ಇದೀಗ ತಾಂತ್ರಿಕ ಸ್ಪರ್ಶ ನೀಡಲಾಗಿದ್ದು, ಆನ್ಲೈನ್ ಮೂಲಕ ಇ – ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪರವಾನಿಗೆ ಪಡೆಯುವ ವೇಳೆ ಜಾನುವಾರಿನ ಭಾವಚಿತ್ರ, ಕಿವಿ ಓಲೆ ಸಂಖ್ಯೆಯನ್ನು ನಮೂದಿಸುವುದು ಅಗತ್ಯವಾಗಿದೆ.
ಪಶು ಸಂಗೋಪನಾ ಇಲಾಖೆಯ ವೆಬ್ಸೈಟ್ https://animaltrans.karahvs.in ಮೂಲಕ ಜಾನುವಾರು ಸಾಗಾಟದಾರರು ಪರವಾನಗಿ ಪಡೆಯಬೇಕಾಗಿದ್ದು, ಈ ಸಂದರ್ಭದಲ್ಲಿ ಯಾವ ಉದ್ದೇಶಕ್ಕಾಗಿ ಜಾನುವಾರು ಸಾಗಾಣೆ ಮಾಡಲಾಗುತ್ತಿದೆ ಎಂಬುದನ್ನು ನಮೂದಿಸಬೇಕಾಗುತ್ತದೆ.
ಅಲ್ಲದೆ ಸಾಗಾಣೆಗೆ ಬಳಸುವ ವಾಹನದ ಸಂಖ್ಯೆ, ಚಾಲಕನ ಹೆಸರು, ಚಾಲನಾ ಪರವಾನಗಿ, ದೂರವಾಣಿ ಸಂಖ್ಯೆ ಮೊದಲಾದ ವಿವರಗಳನ್ನು ನಮೂದಿಸಬೇಕಿದ್ದು, ಇದರ ಜೊತೆಗೆ ಯಾವ ಸ್ಥಳದಿಂದ ಹಾಗೂ ಎಲ್ಲಿಯವರೆಗೆ ಜಾನುವಾರನ್ನು ಸಾಗಾಣೆ ಮಾಡಲಾಗುತ್ತಿದೆ ಎಂಬುದರ ವಿವರ ನೀಡಬೇಕಾಗುತ್ತದೆ.