ಹುಬ್ಬಳ್ಳಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೋಮೂತ್ರದಿಂದ ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ಶುಚಿಗೊಳಿಸಿದ್ದು, ಬಳಿಕ ಕನಕ ಜಯಂತಿ ಆಚರಣೆ ಮಾಡಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಎಐಎಂಐಎಂ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಿದ್ದರು.
ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಿದ್ದ ಹಿನ್ನೆಲೆಯಲ್ಲಿ ಇಂದು ಪ್ರಮೋದ್ ಮುತಾಲಿಕ್ ಗೋಮೂತ್ರವನ್ನು ಮೈದಾನದ ತುಂಬ ಸಿಂಪಡಿಸಿ ಶುದ್ಧಗೊಳಿಸಿ ಬಳಿಕ ಕನಕ ಜಯಂತಿ ಆಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಮುತಾಲಿಕ್, ಟಿಪ್ಪು ಜಯಂತಿ ಮಾಡಿದ್ದಕ್ಕಾಗಿ ಮೈದಾನ ಅಪವಿತ್ರವಾಗಿದೆ. ಹಾಗಾಗಿ ಹಿಂದೂಗಳ ಸಂಪ್ರದಾಯದಂತೆ ಅಪವಿತ್ರವಾದ ಜಾಗವನ್ನು ಗೋಮೂತ್ರದ ಮೂಲಕ ಶುದ್ಧಗೊಳಿಸಲಾಗುತ್ತದೆ. ಆ ನಿಟ್ಟಿನಲ್ಲಿ ಶುಚಿಗೊಳಿಸಿದ್ದೇವೆ ಎಂದು ಹೇಳಿದರು.