ಚಿಕ್ಕಬಳ್ಳಾಪುರ: ಮುಂದಿನ ಚುನಾವಣೆಗೆ ಮಹಾರಾಷ್ಟ್ರದವರಿಗೆ ಗಡಿ ಕ್ಯಾತೆ ಬೇಕು. ಬಿಜೆಪಿಯವರಿಗೆ ಜನರ ಬಳಿ ಹೋಗಲು ವಿಷಯ, ಸರಕು ಇಲ್ಲ. ಹೀಗಾಗಿ ಗಡಿ ತಗಾದೆ ತೆಗೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಬೀಚಗಾನಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ನಾಯಕರು ಜನರ ನೆಮ್ಮದಿ ಕೆಡಿಸಿ ಧರ್ಮದ ವಿಚಾರ ಇಟ್ಕೊಂಡು ರಾಜಕೀಯ ಮಾಡಿದರು. ಈಗ ಗಡಿ ವಿವಾದ ತೆಗೆಯುತ್ತಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವೇ ಇದೆ. ಹೀಗಿರುವಾಗ ಹೋಗಿ ಮಾತನಾಡಲಿ ಅದನ್ನು ಬಿಟ್ಟು ಸರ್ವಪಕ್ಷಗಳ ಸಭೆ ಕರೆದು ಏನು ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಗೋಡಂಬಿ, ಬಾದಾಮಿ ಕೊಟ್ಟು ಕಳುಹಿಸಲು ಸರ್ವಪಕ್ಷ ಸಭೆ ಯಾಕೆ? ನಾವೆಲ್ಲರೂ ಭಾರತೀಯರು ಎನ್ನುತ್ತೀರಲ್ಲವೇ? ಅಂದ ಮೇಲೆ ಬೆಳಗಾವಿ ಮಹಾರಾಷ್ಟ್ರದಲ್ಲಿದ್ದರೇನು? ಕರ್ನಾಟಕದಲ್ಲಿದ್ದರೇನು? ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಹೊರಟಿದ್ದೀರಲ್ಲ ಮೊದಲು ಇದನ್ನು ಹೇಳಿ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.