ಶಿವಮೊಗ್ಗ: ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಪತ್ರವೊಂದು ಬಂದಿದ್ದು, ಅದರಲ್ಲಿ ನಾಲಿಗೆ ಕಟ್ ಮಾಡುತ್ತೇನೆ ಎಂದು ಬರೆಯಲಾಗಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಹೆದರಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಅನಾಮಧೇಯ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, ಯಾರೋ ಹೇಡಿಗಳು ಅನಾಮಧೇಯ ಪತ್ರ ಬರೆದಿದ್ದಾರೆ. ಟಿಪ್ಪು ಸುಲ್ತಾನ್ ಗೆ ಮುಸ್ಲಿಂ ಗೂಂಡಾ ಅಂತ ಕರೆದಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ. ಪತ್ರದ ಬಗ್ಗೆ ತನಿಖೆ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇನೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು.
ಗೂಂಡಾಗಳಿಗೆ ಗೂಂಡಾ ಅಂತ ಕರೆಯದೇ ಬೇರೆ ಪದ ಬಳಸಲು ಆಗುತ್ತಾ ? ಬೆದರಿಕೆ ಪತ್ರ ನಮ್ಮ ರಾಜ್ಯದಿಂದಲೇ ಬಂದಿರುವುದು. ಹೆಚ್ಚಿನ ಭದ್ರತೆ ಅಗತ್ಯವಿಲ್ಲ. ಇಂತಹ ಗೊಡ್ಡು ಬೆದರಿಕೆಗಳಿಗೆ, ಹೇಡಿಗಳಿಗೆ ಭಯಪಡುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಟಿಪ್ಪು ಸುಲ್ತಾನ್ ಬಗ್ಗೆ ಮುಸ್ಲಿಂ ಗೂಂಡಾ ಎಂದು ಕರೆದಿದ್ದೀಯಾ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿಗೆ ಕಟ್ಟಡ ಕಟ್ಟಲು ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕು ನಿನಗೆ. ಮುಸ್ಲಿಂರು ಮಾತ್ರ ಬೇಡ ನಾಚಿಕೆಯಾಗಬೇಕು…… ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಮಗನೆ ಬಾಲ ಬಿಚ್ಚಬೇಡ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಮಾಜಿ ಸಚಿವರಿಗೆ ಪತ್ರ ಬರೆದು ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಎಸ್ ಪಿ ಲಕ್ಷ್ಮಿ ಪ್ರಸಾದ್ ಅವರಿಗೆ ದೂರು ನೀಡಿದ್ದಾರೆ.